ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಸಾವರ್ಡೆ ಪಂಚಾಯತ ಕ್ಷೇತ್ರದಲ್ಲಿ ಬರುವ ತೋಣೀರ್ ಜಲಪಾತ ವೀಕ್ಷಣೆಗೆ ಬಂದಿದ್ದ 7 ಜನರ ಪೈಕಿ ಮಧ್ಯಪ್ರದೇಶ ಮೂಲದ ಒಬ್ಬ ಯುವಕ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ. ಮೃತಪಟ್ಟ ವ್ಯಕ್ತಿಯ ಹೆಸರು ಪಂಕಜ್ ರಜಪೂತ್ (30, ಮಧ್ಯಪ್ರದೇಶ) ಎಂದು ಗುರುತಿಸಲಾಗಿದ್ದು, ಈತ ಗೋವಾದ ಕಾಂದೋಳಿಯ ತಾಜ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಗೋವಾದ ಸತ್ತರಿ ತಾಲೂಕಿನ ಗುಡ್ಡದ ಮೇಲಿಂದ ಧುಮ್ಮಿಕ್ಕುವ ತೋಣಿರ್ ಜಲಪಾತ ಅತ್ಯಂತ ಆಕರ್ಷಣೆ ಮತ್ತು ಅಷ್ಟೇ ಅಪಾಯಕಾರಿಯೂ ಆಗಿದೆ. ಕಾಂದೋಳಿಯಿಂದ 7 ಜನರ ತಂಡ ತೋಣಿರ್ ಜಲಪಾತ ವೀಕ್ಷಣೆಗೆ ಬಂದಿತ್ತು. ನೀರಿಗೆ ಸ್ನಾನಕ್ಕೆ ಇಳಿದ ಸಂದರ್ಭದಲ್ಲಿ ಪಂಕಜ ರಜಪೂತ್ ನೀರಿನಲ್ಲಿ ಕೊಚ್ಚಿಹೋದ ಎನ್ನಲಾಗಿದೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ವಾಳಪೈ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದು ಪಂಕಜ್ ನಿಗಾಗಿ ಶೋಧ ಕಾರ್ಯ ಕೈಗೊಂಡರಾದರೂ ಆತ ಪತ್ತೆಯಾಗಲಿಲ್ಲ. ಬುಧವಾರ ತಡ ರಾತ್ರಿಯ ವರೆಗೂ ಶೋಧ ಕಾರ್ಯ ಕೈಗೊಂಡರೂ ಆತ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂಧಿಗಳು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿ ಸಂತೋಷ ಗಾವಸ್ ರವರ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಗೋವಾದ ತೋಣಿರ್ ಜಲಪಾತ ಆಳವಾಗಿದೆ. ಪ್ರವಾಸಿಗರ ಇದರ ಕಲ್ಪನೆಯಿಲ್ಲದೆಯೇ ನೀರಿಗಿಳಿಯುತ್ತಾರೆ. ಕಳೆದ ವರ್ಷ ಇದೇ ಜಲಪಾತದಲ್ಲಿ ಇಬ್ಬರು ಪ್ರವಾಸಿಗರು ಬಿದ್ದು ಸಾವನ್ನಪ್ಪಿದ್ದರು. ಇದೀಗ ಮತ್ತೆ ಇಂದಹದ್ದೇ ಘಟನೆ ಮರುಕಳಿಸಿದೆ.