ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಯಲ್ಲಾಪುರ ಜಾತ್ರೆ ಅಂಗವಾಗಿ ನಡೆಯುವ ‘ಹೊರ ಮಂಗಳವಾರ’ ಆಚರಣೆಗೆ ಮಕ್ಕಳ ಉದ್ಯಾನವನ ಸಿದ್ಧಗೊಂಡಿದೆ.

ಜನವರಿ 20, 27 ಹಾಗೂ ಫೆಬ್ರವರಿ 3ರಂದು ‘ಹೊರ ಮಂಗಳವಾರ’ ಆಚರಣೆ ನಡೆಯಲಿದ್ದು, ಜೋಡಕೆರೆ ಬಳಿಯಿರುವ ಉದ್ಯಾನವನವನ್ನು ಸ್ವಚ್ಚ ಮಾಡಲಾಗಿದೆ. ಉದ್ಯಾನವನಕ್ಕೆ ಬರುವವರ ಅನುಕೂಲಕ್ಕಾಗಿ ಅಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಗಿಡ-ಗಂಟಿಗಳನ್ನು ತೆರವು ಮಾಡಲಾಗಿದೆ. ಮುರಿದು ಬಿದ್ದಿದ್ದ ಕಪೌಂಡ್ ಸರಿಪಡಿಸಿ ಅದಕ್ಕೆ ಬಣ್ಣ ಬಡಿಯುವ ಕೆಲಸ ನಡೆದಿದೆ. ಎಲ್ಲೆಂದರಲ್ಲಿ ಬಿದ್ದಿದ್ದ ಕಸವನ್ನು ಆರಿಸಿ ಉದ್ಯಾನವನವನ್ನು ಸುಂದರವನ್ನಾಗಿಸಲಾಗಿದೆ.

ಅಗತ್ಯವಿರುವ ಕಡೆಗಳಲ್ಲಿ ದೀಪಗಳನ್ನು ಅಳವಡಿಸಲಾಗಿದೆ.
ಮಂಜುನಾಥ ನಗರದ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸತೀಶ ನಾಯ್ಕ, ಪ ಪಂ ಆರೋಗ್ಯ ನಿರಿಕ್ಷಕ ಗುರು ಗಡಗಿ ಜೊತೆ ಮುಖ್ಯಾಧಿಕಾರಿ ಕುಮಾರ ನಾಯ್ಕ ಹಾಗೂ ಇಂಜಿನಿಯರ್ ಹೇಮಚಂದ್ರ ನಾಯ್ಕ ಉದ್ಯಾನವನ ವೀಕ್ಷಣೆ ಮಾಡಿದ್ದಾರೆ. 50ಕ್ಕೂ ಅಧಿಕ ಕಾರ್ಮಿಕರನ್ನು ಅಲ್ಲಿ ನಿಯೋಜಿಸಿ ನಾಲ್ಕು ದಿನಗಳ ಕೆಲಸ ಮಾಡಿಸಿದ್ದಾರೆ.
ಈ ಎಲ್ಲಾ ಹಿನ್ನಲೆ ಹೊರ ಮಂಗಳವಾರ ಆಚರಣೆಗೆ ಉದ್ಯಾನವನವೂ ಯೋಗ್ಯ ಪ್ರದೇಶವಾಗಿದ್ದು, ಜನ ಅದರ ಪ್ರಯೋಜನಪಡೆಯಬೇಕು. ವಿವಿಧ ಪ್ರವಾಸಿ ತಾಣಗಳಿಗೆ ಹೋಗುವುದರ ಜೊತೆ ಉದ್ಯಾನವನದ ವಾತಾವರಣವನ್ನು ಅನುಭವಿಸಬೇಕು ಎಂದು ಆ ಭಾಗದವರು ಮನವಿ ಮಾಡಿದ್ದಾರೆ.