ಸುದ್ದಿ ಕನ್ನಡ ವಾರ್ತೆ

ಹಳಿಯಾಳ:ತಾಲೂಕಿನಿಂದ ಜನೆವರಿ 9 ಹಾಗೂ 10ರಂದು ಮಂಗಳೂರಿನಲ್ಲಿ ನಡೆದ ಬೀಚ್ ಕುಸ್ತಿ ಪಂದ್ಯಾವಳಿಯಲ್ಲಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಒಟ್ಟು 25 ಪದಕಗಳನ್ನು ಗೆದ್ದು ಅತ್ಯುತ್ತಮ ಸಾಧನೆ ಮಾಡಿದ ಹಳಿಯಾಳ ಕ್ರೀಡಾ ವಸತಿ ನಿಲಯದ ಪ್ರತಿಭಾವಂತ ಕುಸ್ತಿಪಟುಗಳನ್ನು ಶಾಸಕ ಶ್ರೀ ಆರ್.ವಿ. ದೇಶಪಾಂಡೆ ಅವರು ತಮ್ಮ ಸ್ವಗೃಹದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡಾಪಟುಗಳ ಶಿಸ್ತು, ಪರಿಶ್ರಮ ಮತ್ತು ನಿರಂತರ ಅಭ್ಯಾಸವೇ ಈ ಯಶಸ್ಸಿನ ಮೂಲ ಎಂದು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಹಾರೈಸಿದರು.

ಇದೇ ವೇಳೆ, ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಮಹಿಳಾ ವಿಭಾಗದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾ ವಸತಿ ನಿಲಯದ ಕುಸ್ತಿಪಟುಗಳನ್ನು ವಿಶೇಷವಾಗಿ ಅಭಿನಂದಿಸಿ, ಆತ್ಮವಿಶ್ವಾಸದಿಂದ ಸ್ಪರ್ಧಿಸಿ ರಾಜ್ಯ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕೆಂದು ಶುಭಕೋರಿದರು.

ಕ್ರೀಡಾ ವಸತಿ ನಿಲಯಗಳ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳು ಸಿಗುತ್ತಿದ್ದು, ಯುವಕರನ್ನು ಕ್ರೀಡೆಯತ್ತ ಪ್ರೋತ್ಸಾಹಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ತಿಳಿಸಿದ ಅವರು, ಕ್ರೀಡಾಭಿವೃದ್ಧಿಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಮುಂದುವರಿಸುವ ಭರವಸೆಯನ್ನು ನೀಡಿದರು.