ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಪಟ್ಟಣದ ತಿಲಕ
ಚೌಕ್‌ನಲ್ಲಿರುವ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ ಕಟ್ಟಡದ ಪಕ್ಕದಲ್ಲಿ ಆತಂಕಕಾರಿ ಬೆಳೆದಿದ್ದ ಪುರಾತನ ಮರದ ರೆಂಬೆಗಳನ್ನು ಬುಧವಾರ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಯಶಸ್ವಿಯಾಗಿ ತೆರವುಗೊಳಿಸಲಾಯಿತು.
ಈ ಮರದ ರೆಂಬೆಗಳು ರಸ್ತೆ ಬದಿಗೆ ಚಾಚಿಕೊಂಡಿದ್ದು, ಬೀಳುವ ಹಂತದಲ್ಲಿದ್ದವು. ಇದರಿಂದ ಪಕ್ಕದ ಕಟ್ಟಡಕ್ಕೆ ಹಾನಿಯಾಗುವ ಭೀತಿ ಇತ್ತು. ಅಲ್ಲದೆ, ಇದೇ ರಸ್ತೆಯ ಮೂಲಕ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆತಂಕದಲ್ಲಿದ್ದರು. ವಿಶೇಷವಾಗಿ, ಜರುಗಲಿರುವ ಜಾತ್ರೆಯ ಶೀಘ್ರದಲ್ಲಿ ಮೆರವಣಿಗೆಯ ಗ್ರಾಮದೇವಿ
ಸಂದರ್ಭದಲ್ಲಿ ದೇವಿಯ ಮೂರ್ತಿಗೆ ಈ ರೆಂಬೆಗಳು ತಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಬಾರದು ಎಂಬ ಮುನ್ನೆಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯರಾದ ಉಲ್ಲಾಸ ಶಾನಭಾಗ, ಪವನ ಕಾಮತ್, ಸುಧಾಕರ ಪ್ರಭು, ರಜತ್ ಬದ್ದಿ, ಅಮಿತ ಅಂಗಡಿ ಹಾಗೂ ಶಿರೀಶ್ ಪ್ರಭು ಅವರು ಈ ಗಂಭೀರ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿದ್ದರು.
ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ಹೆಸ್ಕಾಂ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ರೆಂಬೆಗಳನ್ನು ಕಡಿದರು.
ಜಾತ್ರೆಯ ಸಂಭ್ರಮದ ನಡುವೆ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ ಇಲಾಖೆಗಳ ಕಾರ್ಯಕ್ಕೆ ಹಾಗೂ ಇದಕ್ಕೆ ಶ್ರಮಿಸಿದ ಸ್ಥಳೀಯ ಮುಖಂಡರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
