ಸುದ್ದಿ ಕನ್ನಡ ವಾರ್ತೆ
ಶಿರಸಿ: ತಾಲೂಕಿನ ಬಳಗೇರಿ ಗ್ರಾಮದಲ್ಲಿ ನಡೆದಿದ್ದ ಸರಣಿ ದನಗಳ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿರಸಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದು, ಹಾವೇರಿ ಜಿಲ್ಲೆಯ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜನವರಿ 9 ಮತ್ತು 10ರ ನಡುವಿನ ಅವಧಿಯಲ್ಲಿ ಬಳಗೇರಿ ನಿವಾಸಿ ರಾಮಚಂದ್ರ ನರಸಿಂಹ ಗೌಡ ಮತ್ತು ಅವರ ಸಹೋದರರ ಕೊಟ್ಟಿಗೆಯಲ್ಲಿದ್ದ 4 ಎತ್ತು ಹಾಗೂ 3 ಹೋರಿಗಳನ್ನು
ಕಳ್ಳತನ ಮಾಡಲಾಗಿತ್ತು.
ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಗಾಂಭೀರ್ಯ ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕರು ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಜ.15ರ ಗುರುವಾರ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಿರೂರ ಗ್ರಾಮದ ಮೋಹನ ಗೊಲ್ಲರ, ಬಸವರಾಜ ಗೊಲ್ಲರ, ಅವಿನಾಶ ಗೊಲ್ಲರ, ಸುರೇಶ ಕೊಪ್ಪರಶಿಕೊಪ್ಪ ಮತ್ತು ಅಕ್ಕಿ ಆಲೂರು ಗ್ರಾಮದಅಯೂಬ್ ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಮೂರು ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಹೀಂದ್ರಾ ಪಿಕ್-ಅಪ್ ವಾಹನ ಮತ್ತು ಒಂದು ಮೋಟಾರ್ ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಜಾಲ ಬೀಸಲಾಗಿದೆ.
ಎಸ್ಪಿ ದೀಪನ್ ಎಂ.ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ, ಹಾಗೂ ಡಿವೈಎಸ್ಪಿ ಗೀತಾ ಪಾಟೀಲ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕರಾದ ರಮೇಶ ಎಂ ಹೂಗಾರ ಇವರ ನೇತೃತ್ವದಲ್ಲಿ ಶಿರಸಿ ಗ್ರಾಮೀಣ ಠಾಣೆ ಪಿಎಸ್ಐ ಸಂತೋಷ್ ಕುಮಾರ್, ಅಶೋಕ ರಾಥೋಡ್ ಮತ್ತು ಎ ಎಸ್ ಐ ಗಳಾದ ಸಂತೋಷ ಕಮಟಗೇರಿ, ಪ್ರದೀಪ ಎಂ ರೇವಣಕರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
