ಸುದ್ದಿ ಕನ್ನಡ ವಾರ್ತೆ
ಗೋವಾದ ಕಾಣಕೋಣ ಲೊಕೋತ್ಸವದಲ್ಲಿ ಆದಿವಾಸಿ ಸಮುದಾಯದ ಪಾರಂಪರಿಕ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ, ಹಿಂದಿನ ಕಾಲದಲ್ಲಿ ಧಾನ್ಯಗಳಿಂದ ಕೈಯಾರೆ ಹಿಟ್ಟು ತಯಾರಿಸುವ ವಿಧಾನವನ್ನು ನೇರ ಪ್ರದರ್ಶನದ ಮೂಲಕ ಇಲ್ಲಿನ ಮಾತೆಯರು ಇಂದಿನ ಪೀಳಿಗೆಯವರಿಗೆ ತೋರಿಸದರು. ಮಹಿಳೆಯರು ಕಲ್ಲು ದಾತೆ (ಕೈ ಚಕ್ಕಿ) ಬಳಸಿಕೊಂಡು ಗೋಧಿ, ಜೋಳ, ರಾಗಿ ಮೊದಲಾದ ಧಾನ್ಯಗಳನ್ನು ರುಬ್ಬಿ ಹಿಟ್ಟು ಮಾಡುವ ಕ್ರಮವನ್ನು ವಿವರಿಸಿದರು.

ಯಂತ್ರಗಳಿಲ್ಲದ ಕಾಲದಲ್ಲಿ ಕುಟುಂಬದ ದೈನಂದಿನ ಆಹಾರಕ್ಕಾಗಿ ಅನುಸರಿಸುತ್ತಿದ್ದ ಈ ವಿಧಾನವು ಶ್ರಮ, ಸಹಕಾರ ಮತ್ತು ಸ್ವಾವಲಂಬಿ ಜೀವನ ಶೈಲಿಯ ಪ್ರತೀಕವಾಗಿದೆ. ಈ ಪ್ರದರ್ಶನವು ಯಂತ್ರಗಳ ಭರಾಟೆ,ಯಾಂತ್ರಿಕ ಜೀವನದ ಬದುಕಿನಲ್ಲಿ ನಮ್ಮ ಪಾರಂಪರಿಕ ಜ್ಞಾನ ಹಾಗೂ ಆಹಾರ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.