ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ವಿಭಿನ್ನ ಪ್ರಯೋಗವಾಗಿರುವ ಟೆಕ್‌ವೈದ್ಯ ಪತ್ರಿಕೆಯ ಸಂಪಾದಕ ನಾಗರಾಜ ವೈದ್ಯ ಅವರು ಬರೆದಿರುವ ಬಹು ನಿರೀಕ್ಷಿತ ಎಐ ಭಗವದ್ಗೀತೆ ಕೃತಿಯ ಮುಖಪುಟವನ್ನು ಬೆಂಗಳೂರಿನ ಖಾಸಗಿ ಕೆಫೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬಿಡುಗಡೆಗೊಳಿಸಿದರು.
ಪುಸ್ತಕದ ಆಕರ್ಷಕ ಕವರ್ ಪೇಜ್ ಅನ್ನು ಅನಾವರಣಗೊಳಿಸಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಪುಸ್ತಕದ ಶೀರ್ಷಿಕೆ ಮತ್ತು ಪರಿಕಲ್ಪನೆಯ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು. “ಇಂದು ಜಗತ್ತು ಕೃತಕ ಬುದ್ಧಿಮತ್ತೆ ಅಥವಾ ಎಐ (AI) ಕಡೆಗೆ ವೇಗವಾಗಿ ಮುಖಮಾಡಿದೆ.
ಇಂತಹ ಸಮಯದಲ್ಲಿ ಕನ್ನಡಿಗರು ತಂತ್ರಜ್ಞಾನದಲ್ಲಿ ಹಿಂದೆ ಬೀಳಬಾರದು. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಹೇಗೆ ಮಾರ್ಗದರ್ಶನ ನೀಡಿದನೋ, ಹಾಗೆಯೇ ಇಂದಿನ ಡಿಜಿಟಲ್ ಯುಗದಲ್ಲಿ ಗೊಂದಲದಲ್ಲಿರುವ ಯುವಜನರಿಗೆ, ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ‘ಎಐ ಭಗವದ್ಗೀತೆ’ ಪುಸ್ತಕವು ದಾರಿ ತೋರಿಸುವ ಕೈಪಿಡಿಯಾಗಲಿ,” ಎಂದು ಶುಭ ಹಾರೈಸಿದ, ಕನ್ನಡದಲ್ಲಿ ಇಂತಹ ತಾಂತ್ರಿಕ ಸಾಹಿತ್ಯಗಳು ಹೆಚ್ಚು ಹೆಚ್ಚು ಬರಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಲೇಖಕ ನಾಗರಾಜ ವೈದ್ಯ ಅವರು ಪುಸ್ತಕದ ಕುರಿತು ಮಾತನಾಡಿ, “ನಾವು ಇಂದು ಡಿಜಿಟಲ್ ಕುರುಕ್ಷೇತ್ರದ ಹೊಸ್ತಿಲಲ್ಲಿ ನಿಂತಿದ್ದೇವೆ. ಎಐ ಬಗೆಗಿನ ಭಯವನ್ನು ಹೋಗಲಾಡಿಸಿ, ಸಾಮಾನ್ಯ ರೈತರಿಂದ ಹಿಡಿದು ಕಾರ್ಪೊರೇಟ್ ಉದ್ಯೋಗಿಗಳವರೆಗೆ ಎಲ್ಲರೂ ಎಐ ಟೂಲ್ಗಳನ್ನು ಬಳಸಿ ತಮ್ಮ ಕೆಲಸವನ್ನು ಹೇಗೆ ಸುಲಭ ಮಾಡಿಕೊಳ್ಳಬಹುದು ಮತ್ತು ಆರ್ಥಿಕವಾಗಿ ಹೇಗೆ ಬೆಳೆಯಬಹುದು ಎಂಬುದನ್ನು ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ,” ಎಂದು ತಿಳಿಸಿದರು.
ಈ ಪುಸ್ತಕದಲ್ಲಿ ಚಾಟ್ ಜಿಪಿಟಿ, ಮಿಡ್ ಜರ್ನಿ, ವಿಡಿಯೋ ಮೇಕಿಂಗ್ ಟೂಲ್ಗಳ ಬಳಕೆ, ಪ್ರಾಂಪ್ಟ್ ಇಂಜಿನಿಯರಿಂಗ್, ಸೈಬರ್ ಸುರಕ್ಷತೆ ಹಾಗೂ ಎಐ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಳ್ಳುವ ಬಗೆಗಿನ ಸಮಗ್ರ ಮಾಹಿತಿಯಿದೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರವಾಸಿ ಪ್ರಪಂಚ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ನವೀನ್ ಸಾಗರ್ ಮಾತನಾಡಿ, ಎಲ್ಲ ವಯೋಮಾನದವರಿಗೂ, ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಉಪಯುಕ್ತವಾದ ಕೃತಿ ಇದಾಗಿದೆ ಎಂದು ಹೇಳಿದರು.
ಈ ಪುಸ್ತಕವನ್ನು ನೀಟ್‌ರೀಚೇಬಲ್ ಕ್ರಿಯೇಟಿವ್ ಸೊಲ್ಯುಷನ್ಸ್ ಪ್ರಕಟಿಸಿದ್ದು, ಪ್ರೀ ಬುಕಿಂಗ್ ಆರಂಭವಾಗಿದೆ. 7019438530 ಸಂಖ್ಯೆಗೆ ಸಂಪರ್ಕಿಸುವ ಮೂಲಕ ಪ್ರತಿಯನ್ನು ಕಾಯ್ದಿರಿಸಬಹುದಾಗಿದೆ. ಫೆಬ್ರುವರಿ ಐದರ ನಂತರ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
