ಸುದ್ದಿ ಕನ್ನಡ ವಾರ್ತೆ
ಶಿರಸಿ: ಉತ್ತರಕನ್ನಡ ಸಂಸದರ ಕ್ಷೇತ್ರದಾದ್ಯಂತ
ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಕುರಿತು ಬುಧವಾರ ಶಿರಸಿಯಲ್ಲಿ ಬಿಎಸ್‌ಎನ್ಎಲ್ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಯಿತು.
ಕ್ಷೇತ್ರದಲ್ಲಿ ಇತ್ತೀಚೆಗೆ ಹೊಸದಾಗಿ ನಿರ್ಮಾಣವಾಗಿರುವ ಮೊಬೈಲ್ ಟವರ್‌ಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದ್ದು, ಇದರಿಂದಾಗಿ ಜನರಿಗೆ ಸುಗಮವಾಗಿ ದೂರಸಂಪರ್ಕ ಸೇವೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ
ಕೇಳಿಬರುತ್ತಿವೆ.
ಈ ಸಭೆಯಲ್ಲಿ ಮಾತನಾಡಿದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೊಸ ಟವರ್‌ಗಳು ಕಾರ್ಯಾರಂಭ ಮಾಡಿದ್ದರೂ ನೆಟ್‌ವರ್ಕ್ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಇಂಟರ್ನೆಟ್
ಮತ್ತು ಮೊಬೈಲ್ ಸೇವೆಯ ಆಸ್ಥಿರತೆಯಿಂದಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಾಗೂ ಸಾರ್ವಜನಿಕರ ದೈನಂದಿನ ಡಿಜಿಟಲ್ ವ್ಯವಹಾರಗಳಿಗೆ ತೀವ್ರ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಹೊಸಟವರ್‌ಗಳಲ್ಲಿನ ತಾಂತ್ರಿಕ ದೋಷಗಳನ್ನು ತಕ್ಷಣವೇ ಸರಿಪಡಿಸಿ, ಗುಣಮಟ್ಟದ ನೆಟ್ವರ್ಕ್ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ
ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕಟ್ಟುನಿಟ್ಟಾಗಿ ತಿಳಿಸಲಾಗಿದ್ದು, ಅಧಿಕಾರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
