ಸುದ್ದಿ ಕನ್ನಡ ವಾರ್ತೆ
ಶಿರಸಿ: ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಬುಧವಾರ ಒಂದು ತಾಸಿಗೂ ಅಧಿಕ ಕಾಲ ಅಕಾಲಿಕ ಮಳೆ ಸುರಿದ ಪರಿಣಾಮ ರೈತರು ತೀವ್ರ ಪರದಾಡುವಂತಾಯಿತು.

ಅಡಿಕೆ ಕೊಯ್ಲು ಭರದಿಂದ ನಡೆಯುತ್ತಿದ್ದು, ಭತ್ತ ಕೊಯ್ಲು ಮಾಡಿ ಬಣವೆ ಹಾಕಿಟ್ಟಿದ್ದಾರೆ. ರೈತರು ಕೆಂಪಡಕೆ ಸಿದ್ಧಪಡಿಸುವ ತರಾತುರಿಯಲ್ಲಿ ಮನೆಯಂಗಳದಲ್ಲಿ ಒಣಗಿಸಿದ್ದಾರೆ. ಮಳೆಯ ವಾತಾವರಣದಿಂದಾಗಿ ಈ ಅಡಿಕೆ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿದೆ. ಕೆಂಪಡಿಕೆ ಸಿದ್ಧಪಡಿಸಲು ಕನಿಷ್ಠ ಒಂದು ವಾರಗಳ ಕಾಲ ಬಿಸಿಲು ಬೀಳಬೇಕಿದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದ ಕಾರಣ ರೈತರಿಗೆ ಅಡಿಕೆ ಒಣ ಹಾಕಲು ಸಾಧ್ಯವಾಗಿಲ್ಲ. ಅಲ್ಲದೇ ಬುಧವಾರ ಮಳೆ ಸಹ ಸುರಿದಿದ್ದರಿಂದ ರೈತರು ಅಡಿಕೆಯನ್ನು ಮಳೆ ತಾಗದಂತೆ ಮುಚ್ಚಲು ಹರಸಾಹಸ ಮಾಡಿದರು.

ಈ ವರ್ಷ ಚಳಿ ಜಾಸ್ತಿ ಇದ್ದ ಕಾರಣ ಮಾವಿನಗಿಡಗಳಲ್ಲಿ ಅಧಿಕ ಪ್ರಮಾಣದಲ್ಲಿ ಹೂವು ಬಿಟ್ಟಿದ್ದವು. ರೈತರು ಉತ್ತಮ ಬೆಳೆಯನ್ನೂ ನಿರೀಕ್ಷಿಸಿದ್ದರು. ಮಳೆಯಿಂದಾಗಿ ಈ ಹೂವು ಫಸಲು ಕಟ್ಟುವ ಸಾಧ್ಯತೆ ಕ್ಷೀಣಿಸಿದೆ. ಅನಿರೀಕ್ಷಿತ ಈ ಮಳೆ ರೈತರಿಗೆ ಲಾಭಕ್ಕಿಂತ ಹಾನಿಯನ್ನೇ ಜಾಸ್ತಿ ಮಾಡಿದೆ ಎಂದು ಹೈರಾಣಾಗಿದ್ದಾರೆ.