ಸುದ್ದಿ ಕನ್ನಡ ವಾರ್ತೆ
ಬೇಡ್ತಿ ನದಿ ತಿರುವು ಯೋಜನೆ ಮತ್ತೆ ಸುದ್ದಿಗೆ ಬಂದಿದೆ. 90 ರ ದಶಕದಿಂದಲೂ ಪ್ರಸ್ತಾವನೆ ರೂಪದಲ್ಲಿದ್ದ ಈ ಯೋಜನೆಗೆ ಈಗ ಮತ್ತೆ ಡಿಪಿಆರ್ ತಯಾರಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಮತ್ತೆ ಈ ಬಗ್ಗೆ ವ್ಯಾಪಕ ವಿರೋಧ ಶುರುವಾಗುವುದಕ್ಕೆ ಕಾರಣವಾಗಿದೆ.
ಹೀಗೆ ವಿರೋಧಿಸುವವರಲ್ಲಿ ಬಹುತೇಕರಿಗೆ ಇದು ಹೇಗೆ ಜಾರಿಗೆ ಬರುತ್ತದೆ ಎಂಬ ಮಾಹಿತಿ ಇಲ್ಲ.
ವಾಸ್ತವದಲ್ಲಿ ಈ ಬೇಡ್ತಿ-ವರದಾ ನದಿ ಜೋಡಣೆಯ ಯೋಜನೆ ಎರಡು ಹಂತದಲ್ಲಿ ನಡೆಯುತ್ತದೆ.
ಬೇಡ್ತಿ ನದಿಯ ಎರಡು ಉಪನದಿಗಳಾದ ಪಟ್ಣದ ಹೊಳೆ ಹಾಗೂ ಶಾಲ್ಮಲಿ/ಶಾಲ್ಮಲಾ ಹೊಳೆಗಳನ್ನು ಜೋಡಿಸುವುದು ಒಂದು ಕಡೆಯಾದರೆ, ಬೇಡ್ತಿ ನದಿಯ ನೀರನ್ನು ಮೇಲೆತ್ತಿ ವರದಾ ನದಿಯ ಉಪನದಿಯಾದ ಧರ್ಮಾ ನದಿಗೆ ಸೇರಿಸುವುದು ಈ ಒಟ್ಟು ಯೋಜನೆಯ ವಿವರ.
ಶಿರಸಿಯ ಶಿರಾಲಬೈಲು ಗ್ರಾಮದಲ್ಲಿ ಪಟ್ಣದ ಹೊಳೆಗೆ 145 ಮೀಟರ್ ಉದ್ದ ಬ್ಯಾರೇಜ್ ಕಟ್ಟಿ, ಅದರಲ್ಲಿ ಸಂಗ್ರಹವಾದ ನೀರನ್ನು 6.5 ಕಿ.ಮೀ ಸುರಂಗ ಕೊರೆದು, ಹುಳಗೋಳ ಗ್ರಾಮದ ಬಳಿ ಹರಿಯುವ ಶಾಲ್ಮಲಾ ಹೊಳೆಗೆ ತಂದು ಬಿಡುವುದು. ನಂತರ, ಈ ಶಾಲ್ಮಲಾ ಹೊಳೆಗೆ ಇದೇ ಹುಳಗೋಳ ಗ್ರಾಮದಲ್ಲಿ 202 ಮೀಟರ್ ಬ್ಯಾರೇಜ್ ನಿರ್ಮಾಣ ಮಾಡಿ, ಅಲ್ಲಿ ಎರಡೂ ಹಳ್ಳದಿಂದ ಅಂದರೆ ಪಟ್ಣದ ಹೊಳೆ ಮತ್ತು ಶಾಲ್ಮಲಾ ಹೊಳೆಯಿಂದ ಸಂಗ್ರಹವಾದ ನೀರನ್ನು ಮತ್ತೆ 6.7 ಕಿ.ಮೀ ಉದ್ದದ ಸುರಂಗ ಸೇರಿದಂತೆ 18 ಕಿ.ಮೀ ವರೆಗೆ ಹರಿಸಿ, ವರದಾ ನದಿಗೆ ತೆಗೆದುಕೊಂಡು ಹೋಗಿ ಬಿಡುವುದು. ಈ ಲಿಂಕ್‌ನಿಂದ 300 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಲಭ್ಯವಾಗುತ್ತದೆ ಎಂಬುದು ಸದ್ಯದ ಅಂದಾಜು.
ಇನ್ನೊಂದು ಹಂತದಲ್ಲಿ, ಯೆಲ್ಲಾಪುರ ತಾಲೂಕಿನ ಸುರೆಮನೆ ಬಳಿ ಮೂಲ ಬೇಡ್ತಿ ನದಿಗೆ 165 ಮೀಟರ್ ಉದ್ದದ ಬ್ಯಾರೇಜ್ ನಿರ್ಮಾಣ ಮಾಡಿ, ಅದರ ನೀರನ್ನು ಧರ್ಮಾ ನದಿಗೆ ತೆಗೆದುಕೊಂಡು ಹೋಗಿ ಬಿಡುವುದು.
ಹೀಗೆ ಈ ನೀರನ್ನು ಎತ್ತಿ ಕಳುಹಿಸುವುದಕ್ಕೆ ಒಂದು ವರ್ಷಕ್ಕೆ 320 ಮಿಲಿಯನ್ ಯುನಿಟ್ ವಿದ್ಯುತ್ ಬೇಕಾಗುತ್ತದೆ. ಅಲ್ಲೇ ಸ್ವಲ್ಪ ಕಿಲೋಮೀಟರ್ ದೂರದಲ್ಲಿರುವ ಗೇರಸೊಪ್ಪಾ ಆಣೆಕಟ್ಟೆಯಲ್ಲಿ ಉತ್ಪಾದನೆಯಾಗುವ ಅಷ್ಟೂ ವಿದ್ಯುತ್ ಇದೊಂದಕ್ಕೇ ಬೇಕಾಗುತ್ತದೆ! ಅಂದರೆ, ಈ ಯೋಜನೆಯನ್ನು ಜಾರಿ ಮಾಡಲು ಅಂದರೆ, ಬ್ಯಾರೇಜ್‌ಗಳ ನಿರ್ಮಾಣ, ಪಂಪ್‌ಗಳನ್ನು ಅಳವಡಿಸಿ, ಪೈಪ್‌ಗಳನ್ನು ಹಾಕುವುದಕ್ಕೆ ಅಂದಾಜು 10 ಸಾವಿರ ಕೋಟಿ ಖರ್ಚಾಗುತ್ತದೆ ಎಂದುಕೊಳ್ಳಿ, ಈ ಯೋಜನೆಯಿಂದ ಪ್ರತಿ ವರ್ಷ ನೀರನ್ನು ಎತ್ತಿ ವರದಾ ನದಿಗೆ ಚೆಲ್ಲುವುದಕ್ಕೆಂದೇ ಸುಮಾರು 200 ಕೋಟಿ ರೂ.ಗೂ ಹೆಚ್ಚು ಹಣ ಬೇಕಾಗುತ್ತದೆ!
ಅದಾದರೂ ಸರಿ, ವರ್ಷಕ್ಕೆ 200 ಕೋಟಿ ರೂ.ಗೂ ಹೆಚ್ಚು ಹಣ ತೆತ್ತಾದರೂ ಸರಿ ಅಲ್ಲಿಗೆ ನೀರು ಎತ್ತಿ ಕಳುಹಿಸುವುದು ಎಂದೇ ಅಂದುಕೊಳ್ಳೋಣ. ಆದರೆ, ಈ ಪಟ್ಣದಹೊಳೆ, ಶಾಲ್ಮಲಾ ಹೊಳೆ ಹಾಗೂ ಬೇಡ್ತಿ ನದಿ ಇಡೀ ವರ್ಷಪೂರ್ತಿ ಹರಿಯುವ ನದಿಗಳೇ? ಡಿಸೆಂಬರ್ ನಂತರ ಈ ಅಷ್ಟೂ ಹಳ್ಳ/ನದಿಗಳ ನೀರಿನ ಹರಿವು ಸಣ್ಣದಾಗುತ್ತಾ ಬಂದು ಸಂಕ್ರಾಂತಿಯ ಹೊತ್ತಿಗೆ ಹರಿವು ನಿಲ್ಲಲು ಶುರುವಾಗುತ್ತವೆ. ಮಳೆಗಾಲದ ಮೂರ್ನಾಲ್ಕು ತಿಂಗಳು ಉಗ್ರವಾಗಿ ಹರಿಯುವ ಈ ನದಿಗಳಲ್ಲಿ ಜನವರಿ ಹೊತ್ತಿಗೆ ನೀರೇ ಇರುವುದಿಲ್ಲ ಎಂದರೆ ಹಾವೇರಿ ಕಡೆಯ ಜನರು ನಂಬುವುದಕ್ಕೇ ಸಾಧ್ಯವಿಲ್ಲ. ಇದನ್ನು ಪ್ರಾಥಮಿಕ ವರದಿಗಳಲ್ಲೂ ಉಲ್ಲೇಖಿಸಲಾಗಿದೆ. ನವೆಂಬರ್‌ವರೆಗೆ ಹರಿಯುವ ನದಿಗಳು ಎಂದೇ ಪ್ರಾಥಮಿಕ ವರದಿಗಳೂ ಹೇಳುತ್ತವೆ.
ಆದರೆ, ಅಲ್ಲೆಲ್ಲೋ ಕೂತ ರಾಜಕಾರಣಿಗಳಿಗೆ ಇವು ಅರ್ಥವಾಗುವುದಿಲ್ಲ.
ಮೊದಲು ಈ ಯೋಜನೆಯ ಸಾಧಕ ಮತ್ತು ಬಾಧಕದ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಬೇಕು. ಅಂದರೆ, ಈ ನದಿ ನೀರನ್ನು ತಿರುಗಿಸಿ ತೆಗೆದುಕೊಂಡು ಹೋದರೆ, ನೀರು ಸಿಗುವ ಪ್ರದೇಶದಲ್ಲಿರುವ ಜನರಿಗೆ ನೀರಿನ ಅಗತ್ಯ ಯಾವಾಗ ಇರುತ್ತದೆ, ಅವರ ಅಗತ್ಯವೇ ಜೂನ್‌ನಿಂದ ನವೆಂಬರ್‌ವರೆಗೆ ಎಂದಾದರೆ ಈ ಯೋಜನೆಯಲ್ಲಿ ಅರ್ಥವಿದೆ. ಆದರೆ, ಅರ್ಧ ವರ್ಷದ ವರೆಗಷ್ಟೇ ನೀರನ್ನು ಹೊತ್ತೊಯ್ಯುವ ಈ ಯೋಜನೆಗೆ 10 ಸಾವಿರ ಕೋಟಿ ರೂ. ಖರ್ಚು ಮಾಡಿ, ಆಮೇಲೆ ಪ್ರತಿ ದಿನವೂ ಕೋಟಿಗಟ್ಟಲೆ ವೆಚ್ಚದ ವಿದ್ಯುತ್ ವ್ಯಯಿಸಿ ನೀರು ಹರಿಸುವುದು ಸಾಧುವೇ?
ಇದೇ ಹಣ ಖರ್ಚು ಮಾಡಿ, ಈ ಭಾಗಗಳಲ್ಲಿ ಕೆರೆಗಳನ್ನು ತೋಡಿಸಿದರೆ, ವರ್ಷಪೂರ್ತಿ ನೀರಿನ ಸೌಲಭ್ಯ ಈ ಹಾವೇರಿ ಭಾಗದ ಜನರಿಗೆ ಸಿಗುವುದಿಲ್ಲವೇ?
ಈ ಯೋಜನೆಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ಅದೇನೆಂದರೆ, ವಿದ್ಯುತ್ ಉತ್ಪಾದನೆಯ ಪ್ರಸ್ತಾವನೆಯೇ ಇದರಲ್ಲಿ ಇಲ್ಲದೇ ಇರುವುದು! ಸರಿಯಾದ ಆಣೆಕಟ್ಟೆ ನಿರ್ಮಾಣ ಮಾಡಿ, ವಿದ್ಯುತ್ ಉತ್ಪಾದನೆಯನ್ನಾದರೂ ಮಾಡಿದರೆ ಜನರಿಗೆ ವಿದ್ಯುತ್ ಸಿಗುವುದರ ಜೊತೆಗೆ, ದೊಡ್ಡ ಆಣೆಕಟ್ಟೆ ನಿರ್ಮಾಣ ಮಾಡಿದಾಗ, ಆಣೆಕಟ್ಟೆಯ ಕೆಳಭಾಗದಲ್ಲಿರುವ ಜನರಿಗೆ ನೀರಿಂಗುವ ಪರಿಣಾಮದಿಂದ ಅಂತರ್ಜಲ ಸುಧಾರಿಸಿ ಕೃಷಿಗೆ ಅನುಕೂಲವಾಗುತ್ತದೆ. ಅದೇನೂ ಪ್ರಸ್ತಾವನೆಯಲ್ಲಿ ಇಲ್ಲ.
ಅಂದರೆ, ಇಲ್ಲಿನ ಜನರಿಗೆ ಒಂದು ಚೂರೂ ಪ್ರಯೋಜನ ಇಲ್ಲದ ಈ ಯೋಜನೆಯನ್ನು ಜಿಲ್ಲೆಯ ಜನರು ವಿರೋಧಿಸುವುದರಲ್ಲಿ ಅರ್ಥವಿದೆ. ಇದಕ್ಕಿಂತ ಹೆಚ್ಚಾಗಿ ಈ ಯೋಜನೆಯನ್ನು ವಿರೋಧಿಸಬೇಕಾದವರು ಈ ಯೋಜನೆಯ ಸಂಭಾವ್ಯ ಫಲಾನುಭವಿಗಳು… ಯಾಕೆಂದರೆ, ಇಷ್ಟು ಖರ್ಚು ಮಾಡಿ ಯೋಜನೆಯೊಂದು ಬರುತ್ತಿದೆ ಎಂದಾದರೆ, ಅದು ಇಡೀ ವರ್ಷ ನೀರು ತರುವುದಿಲ್ಲ ಎಂದಾದರೆ, ಅದರಿಂದ ಪ್ರಯೋಜನವಾದರೂ ಏನು? ಅದೂ ಅಲ್ಲದೇ, ಈ ನಿರುಪಯುಕ್ತ ಯೋಜನೆಗೆ ಹತ್ತು ಸಾವಿರ ಕೋಟಿಗಟ್ಟಲೆ ಖರ್ಚು ಮಾಡಿದ ನಂತರವೂ ನೀರಿಲ್ಲ ಎಂದಾದರೆ, ಮತ್ತೆ ಹೊಸ ಯೋಜನೆಗೆ ಸರ್ಕಾರ ಕಾಸು ಕೊಡುವುದಾದರೂ ಹೇಗೆ?
ಒಟ್ಟಿನಲ್ಲಿ, ಈ ಯೋಜನೆಯಲ್ಲಿ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿರುವಂತೆ ಮೇಲ್ನೋಟಕ್ಕಂತೂ ಕಾಣಿಸುತ್ತಿದೆ.
(ಸುದ್ದಿ ಸಂಗ್ರಹ)…..
