ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ವಿವಿಧ ಯೋಜನೆಗಳು ಮತ್ತು ಕಟ್ಟಡ ನಿರ್ಮಾಣಗಳಿಗಾಗಿ ಅಪಾರ ಸಂಖ್ಯೆಯಲ್ಲಿ ಮರಗಳನ್ನು ಕಡಿಯಲಾಗಿದೆ. ಆದರೆ ಹೊಸದಾಗಿ ಗಿಡಗಳನ್ನು ನೆಡುವ ಮೂಲಕ ಅರಣ್ಯೀಕರಣಗೊಳಿಸುವ ಬಗ್ಗೆ ನಿರ್ಲಕ್ಷ ತೋರಿದಂತೆ ಕಂಡುಬರುತ್ತಿದೆ. ರಾಜ್ಯದಲ್ಲಿ ವಿವಿಧ ಯೋಜನೆಗಳಿಗಾಗಿ ಮರಗಳನ್ನು ಕಡಿದ ಹಿನ್ನೆಲೆಯಲ್ಲಿ 4.85 ಲಕ್ಷ ಗಿಡಗಳನ್ನು ನೆಡುವ ಕೆಲಸ ಇನ್ನೂ ಬಾಕಿ ಇದೆ.
ಗೋವಾ ರಾಜ್ಯದಲ್ಲಿ ಮರಗಳನ್ನು ಕಡಿಯುವ ನಿಯಮಗಳನ್ನು ಬಿಗಿಗೊಳಿಸಿರುವಾಗಲೇ ಗೋವಾ ಟ್ರಿ ಅಥೊರಿಟಿ ಕಡಿದ ಮರಗಳ ಬದಲಿಗೆ ಹೆಚ್ಚಿನ ಗಿಡಗಳನ್ನು ನೆಡುವ ಮೂಲಕ ಅರಣ್ಯೀಕರಣ ಬಲಪಡಿಸಲು ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಗೋವಾ ಟ್ರಿ ಅಥೊರಿಟಿಯು ಸಭೆಯನ್ನು ಕೂಡ ನಡೆಸಿದೆ. ರಾಜ್ಯದಲ್ಲಿ ಎಷ್ಟು ಮರ ಕಡಿಯಲಾಗಿದೆ ಮತ್ತು ಬದಲಾಗಿ ಎಷ್ಟು ಗಿಡ ನೆಡಲಾಗುತ್ತಿದೆ ಎಂಬ ಕುರಿತಂತೆಯೂ ಪರಿಶೀಲನೆ ನಡೆಸುವ ಕುರಿತಂತೆಯೂ ಗಮಭೀರವಾಗಿ ಚರ್ಚೆ ನಡೆದಿದೆ.
ಸ್ಥಳೀಯರ ವಿರೋಧದಿಂದಾಗಿ ಪ್ರಸ್ತುತ ವಿವಾದಾತ್ಮಕವಾಗಿರುವ ಗೋವಾದ ಬಿಂಬಲ್ ಯುನಿಟಿ ಮಾಲ್ ನಿರ್ಮಾಣಕ್ಕೆ 97 ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ,ಇದರ ಬದಲಿಗೆ 291 ಸಸಿಗಳನ್ನು ನೆಡಲು ಷರತ್ತು ವಿಧಿಸಲಾಗಿದೆ. ಪೊಂಡಾ ಸಮೀಪದ ಪರ್ಮಾಗುಡಿಯಲ್ಲಿ ಶಿವಾಜಿ ಮಹಾರಾಜರ ವಸ್ತುಸಂಗ್ರಹಾಲಯ ನಿರ್ಮಾಣಕ್ಕಾಗಿ 195 ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದ್ದು 585 ಗಿಡಗಳನ್ನು ನೆಡಲು ಷರತ್ತು ವಿಧಿಸಲಾಗಿದೆ. ರಾಜ್ಯದಲ್ಲಿ ವಿವಿಧ ಯೋಜನೆಗಳಿಗಾಗಿ ಈಗಾಗಲೇ ಮರಗಳನ್ನು ಕತ್ತರಿಸಿದ ಹಿನ್ನೆಲೆಯಲ್ಲಿ 4.85 ಲಕ್ಷ ಗಿಡಗಳನ್ನು ನೆಡುವ ಕೆಲಸ ಬಾಕಿ ಇದೆ. ಅರಣ್ಯೀಕರಣ ಬಲಪಡಿಸಲು ಪ್ರಾಧಿಕಾರವು ಸೂಚನೆ ನೀಡಿದೆ. ಕಳೆದ ವರ್ಷ ಅಕ್ಟೋಬರ್ 16 ರಂದು ಕೋರ್ಟ ನೀಡಿದ ಮಾರ್ಗ ಸೂಚಿಗೆ ಅನುಗುಣವಾಗಿ ಟ್ರೀ ಅಥೋರಿಟಿ ಸೂಚನೆ ನೀಡಿದೆ.
ಯಾವುದೇ ಕಾರಣಕ್ಕಾಗಿ ಪರವಾನಗಿ ಪಡೆದು ಮರ ಕಡಿದರೂ ಕೂಡ ಇದರ ಬದಲಾಗಿ ಮೂರು ಪಟ್ಟು ಹೆಚ್ಚು ಗಿಡಗಳನ್ನು ನೆಡಬೇಕು. ಕೇವಲ ಗಿಡ ನೆಟ್ಟರೆ ಆಗಿಲ್ಲ. ಅವುಗಳನ್ನು 5 ವರ್ಷಗಳ ಕಾಲ ಪೋಷಿಸಿ ಬೆಳೆಸಬೇಕು. 35 ಎ ಖಾಯ್ದೆಯ ಅಡಿಯಲ್ಲಿ ನೆಟ್ಟ ಗಿಡಗಳಿಗೆ ಭಧ್ರತಾ ಖಾತರಿಯಾಗಿ ರಕ್ಷಣಾ ನಿಧಿಯನ್ನು ಸಂಗ್ರಹಿಸಬೇಕು. ಗಿಡಗಳನ್ನು ನೆಟ್ಟು 5 ವರ್ಷ ನಿರ್ವಹಿಸಿ ದೊಡ್ಡದಾಗಿ ಮಾಡಿದರೆ ಭಧ್ರತಾ ಠೇವಣಿಯ ಹಣವನ್ನು ಹಿಂದಿರುಗಿಸಬೇಕು.ಇಲ್ಲವಾದಲ್ಲಿ ಗೋವಾ ವೃಕ್ಷ ಪ್ರಾಧಿಕಾರವು ನಿಧಿಯನ್ನು ಹಾಗೆಯೇ ಇರಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿಯೂ ಸೂಚನೆ ಹೊರಡಿಸಲಾಗಿದೆ.
ಗಿಡಮರಗಳ ಬಗ್ಗೆ ನಿರ್ಲಕ್ಷವೇ…? ಗೋವಾದಲ್ಲಿ 4.85 ಗಿಡಗಳನ್ನು ನೆಡಲು ಬಾಕಿ
