ಸುದ್ದಿ ಕನ್ನಡ ವಾರ್ತೆ
ದಾಂಡೇಲಿ: ತಾಲೂಕಿನ ವಕೀಲರಾಗಿದ್ದ ಅಜಿತ್ ನಾಯಕ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪಾಂಡುರಂಗ ಕಾಂಬಳೆಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ತೀರ್ಪು ನೀಡಿದ್ದಾರೆ.
ಮಂಗಳವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ, 25 ಸಾವಿರ ರೂ. ದಂಡ ಹಾಗೂ ಮೃತರ ಅವಲಂಬಿತರಿಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಮೃತರ ಅವಲಂಬಿತರು ಜಿಲ್ಲಾ ಉಚಿತ ಕಾನೂನು ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದು ಕೂಡ ಹೇಳಿದೆ. 2018ರಲ್ಲಿ ಅಜಿತ್ ನಾಯಕ ಅವರು ತಮ್ಮ ಕಚೇರಿಯಿಂದ ಹೊರ ಬರುತ್ತಿರುವಾಗ ಅವರನ್ನು ಪಾಂಡುರಂಗ ಕಾಂಬಳೆ ಕತ್ತಿಯಿಂದ ಕೊಚ್ಚಿ, ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಆಗಿನ ಪಿ. ಎಸ್. ಐ ಎ.ಎ. ಮುಜಾವರ್, ಪಿ.ಸಿ. ಮಂಜುನಾಥ ಎಚ್. ಶೆಟ್ಟಿ ತನಿಖೆ ನಡೆಸಿ,ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಸಮರ್ಥವಾದ ವಾದ ಮಂಡಿಸಿ, ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಕಳೆದ ಶುಕ್ರವಾರ ನ್ಯಾಯಾಲಯ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಘೋಷಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಜ. 13ರಂದು ಶಿರಸಿ ಪೀಠದಲ್ಲಿ ಪ್ರಕಟಿಸುವುದಾಗಿಯೂ ನ್ಯಾಯಾಧೀಶರು ತಿಳಿಸಿದ್ದರು. ಪ್ರಕರಣದ ಉಳಿದ ನಾಲ್ವರು ಆರೋಪಿಗಳು ಸಾಕ್ಷಿ ಕೊರತೆಯ ಕಾರಣದಿಂದ ಖುಲಾಸೆಗೊಂಡಿದ್ದರು.
