ಸುದ್ದಿ ಕನ್ನಡ ವಾರ್ತೆ
ಜೊಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ರಾಮನಗರ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ರಾಮನಗರ, ಶಾಲಾ ಎಸ್ ಡಿ ಎಂ ಸಿ,ಪಾಲಕರ, ಪೋಷಕರ, ಶಿಕ್ಷಕ ವೃಂದದವರ ಸಹಕಾರ, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಗ್ರಾಹಕ ದಿನದ ಅಂಗವಾಗಿ ಮಕ್ಕಳ ಸಂತೆ (ಮೆಟ್ರಿಕ್ ಮೇಳ) ಕಾರ್ಯಕ್ರಮ 13 ಜನವರಿ 2026ರ ಮಂಗಳವಾರ ರಾಮನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ವ್ಯವಹಾರಿಕ ಜ್ಞಾನ ಬೆಳೆಸುವುದು,ಮಕ್ಕಳಿಗೆ ಅಳತೆ,ತೂಕ,ಲಾಭ ನಷ್ಟದ ಅರಿವು ಮೂಡಿಸುವ ಉದ್ದೇಶದ ಕಾರ್ಯಕ್ರಮದಲ್ಲಿ ಮಕ್ಕಳ ಸಂತೆಯ ಉದ್ಘಾಟನೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಶಾಂತ ನಾಯರ್ ನೆರವೇರಿಸಿದರು. ಎಸ್ ಡಿ ಎಮ್ ಸಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರಾದ ಲತಾ ದೇಸಾಯಿ ಹಾಗೂ ಎಲ್ಲಾ ಸಹ ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.ರಾಮನಗರ ಕ್ಲಸ್ಟರಿನ ಸಿ ಆರ್ ಪಿ ಗಳಾದ ಬಿ ಹೆಚ್ ಭಾಗವಾನ ಸರ್ ಮಾತನಾಡಿ ಮಕ್ಕಳಲ್ಲಿ ಸೃಜನಶೀಲತೆ, ವ್ಯವಹಾರ ಜ್ಞಾನ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಲು ಬಹಳ ಸಹಕಾರಿ,ಇದರಲ್ಲಿ ಮಕ್ಕಳ ವ್ಯಾಪಾರ ಮನೋಭಾವ ಮತ್ತು ಗ್ರಾಹಕರೊಂದಿಗೆ ನಡೆದುಕೊಳ್ಳುವ ರೀತಿ ಮತ್ತು ವ್ಯವಹಾರ ಜ್ಞಾನ,ತೂಕ ಮತ್ತು ಅಳತೆ ಇವುಗಳ ಜ್ಞಾನವನ್ನು ಹೆಚ್ಚಿಸಲು ಮಕ್ಕಳ ಸಂತೆ ಅನಕೂಲಿಸುತ್ತದೆ ಎಂದು ಹೇಳಿದರು.
ಸಹ ಶಿಕ್ಷಕರಾದ ಪ್ರಕಾಶರವರು ಎಲ್ಲರನ್ನು ಸ್ವಾಗತಿಸಿದರು. ಮಕ್ಕಳ ಸಂತೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ್ ಶೇಖ್ ರವರು ಭೇಟಿ ನೀಡಿ ಮಕ್ಕಳ ಸಂತೆಯ ಕಾರ್ಯಕ್ರಮದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಕ್ಕಳ ವ್ಯವಹಾರ ಜ್ಞಾನದ ಜೊತೆ ಬುದ್ಧಿಮತ್ತೆಯ ಶ್ರೇಷ್ಠತೆಯನ್ನು ಬೆಳೆಸಿಕೊಂಡು ಈ ಸಂತೆಯಲ್ಲಿ ಮನೆಯಲ್ಲಿ ಬೆಳೆದ ತರಕಾರಿ,ತಿಂಡಿ ತಿನಿಸುಗಳನ್ನು,ತಂಪು ಪಾನೀಯ,ವಿವಿಧ ಹಣ್ಣುಗಳು,ಇನ್ನಿತರ ವಸ್ತುಗಳು ಸಂತೆಯಲ್ಲಿ ಮಾರಾಟ ನಡೆಯಿತು.
ಈ ಮಕ್ಕಳ ಸಂತೆಗೆ ಇತರ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು, ಶಿಕ್ಷಕಿಯರು ಹಾಗೂ ಮಕ್ಕಳ ಪಾಲಕರು ಆಗಮಿಸಿ ಮಕ್ಕಳನ್ನು ಹುರಿದುಂಬಿಸಿದರು. ಶಾಲೆಯ ಶಿಕ್ಷಕರು ಮಕ್ಕಳಿಗೆ ಪುಸ್ತಕದ ಜ್ಞಾನದ ಹೊರತು ವ್ಯವಹಾರ ಜ್ಞಾನ ಬೆಳೆಸುವ ಸಲುವಾಗಿ ಹಾಗೂ ಕೃಷಿಯ ಬಗ್ಗೆ ಉತ್ತೇಜನ ನೀಡಲು ಮಕ್ಕಳಿಗೆ ಕೃಷಿ ಮಾಡುವುದರೊಂದಿಗೆ ವ್ಯಾಪಾರ ಮಾಡುವುದರ ಕುರಿತು ಮಕ್ಕಳ ಸಂತೆಯನ್ನು ಆಯೋಜಿಸಿದರು. ಮಕ್ಕಳು ಆಸಕ್ತಿಯಿಂದ ಮನೆಯ ಹೊಲದಲ್ಲಿ ಬೆಳೆಸಿದ ತರಕಾರಿಗಳನ್ನು ತಂದು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿದರು. ಪಾಲಕರು ಹಾಗೂ ಸಾರ್ವಜನಿಕರು ಮಕ್ಕಳ ಸಂತೆಯಲ್ಲಿ ಭಾಗವಹಿಸಿ ತಮಗೆ ಬೇಕಾದ ತರಕಾರಿ, ಹಣ್ಣು,ತಿಂಡಿತಿನಿಸು,ಇನ್ನಿತರ ವಸ್ತುಗಳನ್ನು ಖರೀದಿಸಿದರು.
