ಸುದ್ಧಿಕನ್ನಡ ವಾರ್ತೆ
ಪಣಜಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ನಾವು ಮೊಬೈಲ್ ನಂಬಿಕೊಂಡೇ ಸಾಗುತ್ತಿದ್ದು, ಸಂಪೂರ್ಣವಾಗಿ ಮೊಬೈಲ್ ಅವಲಂಭಿತರಾಗಿದ್ದೇವೆ. ಇದ್ದಕ್ಕಿದ್ದಂತೆಯೇ ಈ ತಂತ್ರಜ್ಞಾನ ಕೈಕೊಟ್ಟರೆ ಆಗ ಮನುಷ್ಯತ್ವದ ಆಸರೆಯ ಅಗತ್ಯವಿರುತ್ತದೆ. ದಕ್ಷಿಣ ಗೋವಾದ ನಿರ್ಜನ ಪ್ರದೇಶದಲ್ಲಿ ರಾತ್ರಿ 10 ಗಂಟೆಯ ವೇಳೆ ಗೂಗಲ್ ಮ್ಯಾಪ್ ತಪ್ಪಾಗಿ ಕಾಣಿಸಿದ್ದರಿಂದ ವಿದೇಶಿ ಮಹಿಳೆಯೋರ್ವರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಗೂಗಲ್ ಮ್ಯಾಪ್ ನಂಬಿಕೊಂಡು ರಸ್ತೆಯಲ್ಲಿ ತೆರಳುತ್ತಿರುವಾಗ ದಾರಿತಪ್ಪಿ ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡಾಗ ಸಿಂಧೂ ಕುಮಾರಿ ಎಂಬ ಮಹಿಳೆಯು ದೇವಧೂತರಂತೆ ಬಂದು ವಿದೇಶಿ ಮಹಿಳೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ಘಟನೆ ನಡೆದಿದೆ.
ಲಭ್ಯವಾಗಿರುವ ಮಾಹಿತಿಯ ಅನುಸಾರ- ವಿದೇಶಿ ಮಹಿಳೆಯೋರ್ವಳು ಗೋವಾಕ್ಕೆ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ದಕ್ಷಿಣ ಗೋವಾದಲ್ಲಿರುವ ತನ್ನ ಹೋಟೆಲ್ ಗೆ ರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಇವರಿಗೆ ಗೂಗಲ್ ಮ್ಯಾಪ್ ತಪ್ಪು ದಾರಿ ತೋರಿಸಿದೆ. ಗೂಗಲ್ ಮ್ಯಾಪ್ ಈ ವಿದೇಶಿ ಮಹಿಳೆಯನ್ನು ಮುಖ್ಯ ರಸ್ತೆಯಿಂದ ನಿರ್ಜನ ಪ್ರದೇಶದ ಕಾಡು ದಾರಿಗೆ ಕರೆದುಕೊಂಡು ಹೋಗಿ ನಿಲ್ಲಿಸಿದೆ. ಇದರಿಂದಾಗಿ ಈ ವಿದೇಶಿ ಮಹಿಳೆಯು ಭಯಭೀತರಾಗಿ ದಿಕ್ಕು ತೋಚದೆಯೇ ಅಲ್ಲಿಯೇ ಅಳುತ್ತ ಕುಳಿತಿದ್ದಳು.
ಇದೇ ಸಂದರ್ಭದಲ್ಲಿ ಸಿಂಧುಕುಮಾರಿ ಎಂಬ ಸ್ಥಳೀಯ ಮಹಿಳೆ ಇದೇ ಮಾರ್ಗವಾಗಿ ಬಂದರು. ವಿದೇಶಿ ಮಹಿಳೆ ನಿರ್ಜನ ಪ್ರದೇಶದಲ್ಲಿ ಕುಳಿತು ಅಳುತ್ತಿರುವುದನ್ನು ಕಂಡು ತಮ್ಮ ಬೈಕ್ ನಿಲ್ಲಿಸಿದರು. ನಂತರ ಈ ವಿದೇಶಿ ಮಹಿಳೆಯನ್ನು ಕರೆದುಕೊಂಡು ಹೋಗಿ ಅವಳು ತಂಗಿದ್ದ ರೆಸಾರ್ಟಗೆ ಕರೆದುಕೊಂಡು ಹೋಗಿ ಬಿಟ್ಟರು. ಇದರಿಂದಾಗಿ ವಿದೇಶಿ ಮಹಿಳೆಗೆ ಸಿಂಧುಕುಮಾರಿ ರವರು ದೇವಧೂತರಾಗಿ ಬಂದು ಸಹಾಯ ಮಾಡಿದರು. ಈ ಸಹಾಯಕ್ಕಾಗಿ ಸಿಂಧುಕುಮಾರಿ ರವರು ವಿದೇಶಿ ಮಹಿಳೆಯಿಂದ ಒಂದು ರೂಪಾಯಿಯನ್ನು ಪಡೆಯಲಿಲ್ಲ.
ಈ ಘಟನೆಯು ಎಕ್ಸ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸಿಂಧುಕುಮಾರಿ ರವರು ವಿದೇಶಿ ಮಹಿಳೆಗೆ ಮಾಡಿದ ಸಹಾಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
