ಸುದ್ದಿ ಕನ್ನಡ ವಾರ್ತೆ
ಶಿರಸಿ: ನದಿ ಜೋಡಣೆ ಯೋಜನೆ
ವಿರೋಧಿಸಿ ನಗರದಲ್ಲಿ ಭಾನುವಾರ ನಡೆದ ಬೃಹತ್ ಸಮಾವೇಶದಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.
ಶಿರಸಿ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡ ಬೃಹತ್ ಜನ ಸಮಾವೇಶದ ನಿರ್ಣಯಗಳು.
1. ಪಶ್ಚಿಮ ಘಟ್ಟದಲ್ಲಿ ಬೇಡ್ತಿ ಅಘನಾಶಿಸಿ ಸೇರಿದಂತೆ ಬೃಹತ್ ನದಿ ತಿರುವು ಯೋಜನೆಗಳನ್ನು, ಶರಾವತಿ ಪಂಪ್ಸ್ ಸ್ಟೋರೇಜ್ ಸೇರಿದಂತೆ ಬೃಹತ್ ಜಲ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡಬಾರದು. ಈ ಸಂದರ್ಭದಲ್ಲಿ ಎತ್ತಿನಹೊಳೆ ನದಿ ತಿರುವು ಯೋಜನೆಯ ವಿಫಲತೆಯನ್ನು ಈ ಸಮಾವೇಶ ಸರ್ಕಾರ ಹಾಗೂ ಎಲ್ಲರ ಗಮನಕ್ಕೆ ತರುತ್ತಿದೆ.
2. ಉತ್ತರ ಕನ್ನಡ ಜಿಲ್ಲೆಯ ಸಂಸದರು, ಶಾಸಕರು, ಮಠಾಧೀಶರು, ಜಿಲ್ಲೆಯ 60ಗ್ರಾಮ ಪಂಚಾಯತಗಳು, 20 ರೈತ ಸಹಕಾರಿ ಸಂಘಗಳು, 48 ಗ್ರಾಮ ಅರಣ್ಯ ಸಮಿತಿಗಳು, 55 ಗ್ರಾಮ ಜೀವ ವೈವಿಧ್ಯ ಸಮಿತಿಗಳು, 20 ರೈತ ಒಕ್ಕೂಟಗಳು, ವನವಾಸಿಗಳು, ರೈತರು, ವನ್ನ ಜೀವಿಗಳು, ನದಿ ಹಾಗೂ ಅರಣ್ಯಗಳಿಗೆ ಬೇಡ್ತಿ-ಅಘನಾಶಿಸಿ ನದಿ ತಿರುವು ಯೋಜನೆ ಕುತ್ತು ತರಲಿದೆ ಎಂದು ಸಮಾವೇಶ ಏಕಾಭಿಪ್ರಾಯ ವ್ಯಕ್ತಪಡಿಸುತ್ತಿದೆ.
3. ಶಿರಸಿ ಮತ್ತು ಬೆಂಗಳೂರಿನಲ್ಲಿ ವಿಜ್ಞಾನಿಗಳು, ನೀರಾವರಿ ತಜ್ಞರು ಸಭೆ ಸೇರಿ ನದಿ ತಿರುವು ಯೋಜನೆಗಳು ಸೂಕ್ಷ್ಮ ಪಶ್ಚಿಮ ಘಟ್ಟದ ಮಡಿಲಿಗೆ ಬೇಡ, ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣ
ಸಾಮರ್ಥ್ಯ ಈಗಾಗಲೇ ಮುಗಿದಿದೆ. ಎಂದು ವರದಿ ನೀಡಿದ್ದಾರೆ. ಆದ್ದರಿಂದಸರ್ಕಾರ ಜನಾಭಿಪ್ರಾಯವನ್ನು ಪರಿಗಣಿಸಿ ನದಿ ತಿರುವು ಯೋಜನೆಗಳನ್ನು ಶಾಶ್ವತವಾಗಿ ಕೈ ಬಿಡಬೇಕು ಎಂದು ರೈತರು, ವನವಾಸಿಗಳು, ಮೀನುಗಾರರು ಪಾಲ್ಗೊಂಡಿರುವ ಈ ಸಮಾವೇಶ ಒತ್ತಾಯ ಮಾಡುತ್ತದೆ.
4. ರಾಜ್ಯದ ಮುಖ್ಯಮಂತ್ರಿಗಳು ಈ ಹಿಂದೆ ನಿಯೋಗ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನೀರಾವರಿ ಇಲಾಖೆ ತಜ್ಞರು, ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಬೇಡ್ತಿ ಅಘನಾಶಿಸಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರ ಸಭೆ ಏರ್ಪಡಿಸುವ ಅಶ್ವಾಸನೆಯನ್ನು ನೀಡಿದ್ದರು. ಅದರಂತೆ ಈ ಸಭೆಯ ದಿನಾಂಕವನ್ನು ಆದಷ್ಟು ಬೇಗ ನಿಗದಿಪಡಿಸಬೇಕು ಆಗ್ರಹಿಸುತ್ತದೆ.
5. ಉತ್ತರ ಕನ್ನಡ ಜಿಲ್ಲೆಯ ಸಂಸದರು ಹಾಗೂ ಎಲ್ಲ ಶಾಸಕರ ನೇತೃತ್ವದಲ್ಲಿ ಬೇಡ್ತಿ-ಅಘನಾಶಿಸಿ ಕೊಳ್ಳ ಸಂರಕ್ಷಣಾ ಸಮಿತಿ ನಿಯೋಗ ಕೇಂದ್ರ ಪರಿಸರ ಅರಣ್ಯ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡುವ ದಿನಾಂಕವನ್ನು ಶೀಘ್ರವೇ ನಿಶ್ಚಯಿಸಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮುಂದಾಗಬೇಕು ಸಮಾವೇಶ ಒಕ್ಕೊರಲ ಒತ್ತಾಯ ಮಾಡುತ್ತಿದೆ. 6. ಬೇಡ್ತಿ-ವರದಾ ಹಾಗೂ ಅಘನಾಶಿಸಿ-ವೇದಾವತಿ ನದಿ ತಿರುವು ಯೋಜನೆಗಳ ಬಗ್ಗೆ ಡಿಪಿಆರ್ (ವಿವರ ಯೋಜನಾ ವರದಿ) ತಯಾರಿಸಲು ರಾಜ್ಯ ಸರ್ಕಾರ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯಬೇಕು ಒತ್ತಾಯಿಸುತ್ತದೆ. ಎಂದು ಸಮಾವೇಶ ಒತ್ತಾಯಿಸುತ್ತದೆ. 7.ಬೇಡ್ತಿ-ಅಘನಾಶಿಸಿ ಕಣಿವೆಗಳಲ್ಲಿ. ನದಿ ತಿರುವು ಯೋಜನೆಗಳ ಸ್ಥಳ ಸಮೀಕ್ಷೆಗೆ ಅರಣ್ಯ ಇಲಾಖೆ ಯಾವತ್ತೂ ಅನುಮತಿ ನೀಡಬಾರದು ಎಂದು ರಾಜ್ಯ ಅರಣ್ಯ ಸಚಿವರನ್ನು ಸಮಾವೇಶ ಒತ್ತಾಯಿಸುತ್ತದೆ. 8. ಬೇಡ್ತಿ-ಅಘನಾಶಿಸಿ ನದಿ ತೀರ ಪ್ರದೇಶದ ಜನರಿಗೆ ಆತೀ ಅವಶ್ಯವಾದ ನೀರಾವರಿ ವ್ಯವಸ್ಥೆ ಕಲ್ಪಿಸಲು ವಿಶೇಷ ಜನಸಹಭಾಗಿತ್ವದ ಕಿರು ನೀರಾವರಿ ಯೋಜನೆ ಪ್ರಕಟಿಸಲು ಸರ್ಕಾರವನ್ನು ಸಮಾವೇಶ ಆಗ್ರಹಿಸುತ್ತದೆ. 9. ಮಾನವ ಹಕ್ಕು ಕಾಯಿದೆ ಜಾರಿಗೆ ತಂದ ಮಾದರಿಯಲ್ಲಿಯೇ ನದಿಗಳಿಗೂ ಜೀವಿಸುವ ಹಕ್ಕು ಹಾಗೂ ನದಿಗಳ ನೈಸರ್ಗಿಕ ಸ್ವಚ್ಛ ಹರಿವು ಉಳಿಸಿಕೊಳ್ಳುವ ಹಕ್ಕು ನೀಡುವ ಕಾನೂನು ಜಾರಿಗೆ ತರಲು ಕೇಂದ್ರ, ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಹಾಗೂ ಜನ ಪ್ರತಿನಿಧಿಗಳು ಆದ್ಯತೆ ಮೇರೆಗೆ ಕಾಯಿದೆ ರೂಪಿಸಲು ಮುಂದಾಗಬೇಕು ಎಂದು ಸಮಾವೇಶ ಕರೆ ನೀಡುತ್ತಿದೆ. 10. ಇಂದಿನ ಈ ಸಮಾವೇಶದಲ್ಲಿ ವ್ಯಾಪಕ ಜನ ಶಕ್ತಿ ಪ್ರಕಟವಾಗಲು ಸಮಾಜದ ಎಲ್ಲ ಸಮುದಾಯಗಳು, ಮಠಾಧೀಶರು, ಸಂಘ-ಸಂಸ್ಥೆಗಳು ಬೆಂಬಲ ನೀಡಿವೆ. ಪಶ್ಚಿಮ ಘಟ್ಟದ ಉಳಿವಿಗೆ ಇನ್ನಷ್ಟು ಬಲವಾಗಿ ಜನಾಂದೋಲನ ನಡೆಸಲು ಸಕ್ರಿಯವಾಗಿ ಎಲ್ಲ ಧರ್ಮ, ಸಮುದಾಯಗಳು, ಒಗ್ಗೂಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡುತ್ತೇವೆ ಹಾಗೂ ಇನ್ನಷ್ಟು ಪ್ರಬಲವಾಗಿ ಅಹಿಂಸಾತ್ಮಕವಾಗಿ ಪಶ್ಚಿಮ ಘಟ್ಟ ಉಳಿಸಿ ಚಳುವಳಿ ನಡೆಸಲು ಸಮಾವೇಶ ನಿರ್ಧರಿಸಿದೆ.
