ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ,ರಾಮನಗರ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹನುಮಾನಲೇನ್ ರಾಮನಗರ ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ರಾಮನಗರ ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ 10 ಜನವರಿ 2026 ರ,ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹನುಮಾನಲೇನ್ ರಾಮನಗರದಲ್ಲಿ FLN ಕಲಿಕಾ ಹಬ್ಬ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಆರಂಭದಲ್ಲಿ ರಾಮನಗರ ಕ್ಲಸ್ಟರಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು,ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ನಿರ್ಣಾಯಕರು ಸೇರಿದಂತೆ ಕಾರ್ಯಕ್ರಮದ ಗಣ್ಯರು ಒಳಗೊಂಡಂತೆ ಪಾಲಕರು,ಪೋಷಕರ ಪೂರ್ಣ ಕುಂಭ ಹೊತ್ತ ವಿದ್ಯಾರ್ಥಿಗಳ ವಾದ್ಯ ಸಹಿತ ಶಾಲಾ ಸುತ್ತಮುತ್ತಲಿನ ಪರಿಸರದ ಬೀದಿಯಲ್ಲಿ ಆಕರ್ಷಕ ಭವ್ಯ ಮೆರವಣಿಗೆಯ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದರು.

ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಸ್ವಾಗತ ಗೀತೆ,ಕಲಿಕಾ ಹಬ್ಬದ ಹಾಡನ್ನು ಹಾಡಿದರು. ಕಾರ್ಯಕ್ರಮದ ವೇದಿಕೆಯ ಮೇಲಿನ ಗಣ್ಯರನ್ನು ವಿದ್ಯಾರ್ಥಿಗಳಿಂದ ಹೂ ಗುಚ್ಛವನ್ನು ನೀಡುವುದರ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಮೇಲಿನ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಮನಗರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ, ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ ಸರ್ ಮಕ್ಕಳಲ್ಲಿರುವ ಕಲಿಕಾ ಕಂದರವನ್ನು ದೂರ ಮಾಡಿ,ಅವರ ಕಲಿಕೆಯು ಮನಸ್ಸಿಗೆ ಉಲ್ಲಾಸ ನೀಡುವುದರ ಮೂಲಕ ಪ್ರತಿಯೊಬ್ಬ ಮಗು ಮೂಲಭೂತ ಸಾಕ್ಷರತಾ ಜ್ಞಾನವನ್ನು ಪಡೆಯಬೇಕು ಎನ್ನುವುದು ಈ ಕಾರ್ಯಕ್ರಮದ ಆಶಯ,ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವುದು ಕಲಿಕಾ ಹಬ್ಬದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ,ಸಾರ್ವಜನಿಕ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮಗಳಲ್ಲಿ ಒಂದಾದ ಮಕ್ಕಳ ಕಲಿಕೆಗೆ ಪೂರಕವಾದ ಈ ಕಲಿಕಾ ಹಬ್ಬವನ್ನು ಆಚರಿಸುವುದರಲ್ಲಿ,ನಮ್ಮ ತಾಲೂಕಿನ ಕ್ರೀಯಾಶೀಲ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್ ಅವರ ಪ್ರೋತ್ಸಾಹ,ಸಹಕಾರ,ಮಾರ್ಗದರ್ಶನ ಜೊತೆಯಲ್ಲಿ ನಮ್ಮ ಶಾಲೆಯಲ್ಲಿ ಇದನ್ನು ಸಂಘಟಿಸಿ,ಪಾಲಕರು-ಪೋಷಕರೆಲ್ಲ ಸೇರಿ ಕಾರ್ಯಕ್ರಮವನ್ನು ಇಷ್ಟು ಸಮೃದ್ಧಗೊಳಿಸಿರುವುದು ಎಲ್ಲರ ಮೆಚ್ಚುಗೆಗಷ್ಟೇ ಅಲ್ಲ,ಅಭಿನಂದನೆಗೆ ಕೂಡ ಅರ್ಹವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಮಾತನಾಡಿ ಪ್ರತಿಭೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.ಆ ಪ್ರತಿಭೆ ಹೊರಬರಲು ಮತ್ತು ಕಲಿಕೆ ಗಟ್ಟಿಗೊಳ್ಳಲು ಇಂತಹ ವೇದಿಕೆಗಳು ಅಗತ್ಯವಾಗಿದೆ,ಕಲಿಕಾ ಹಬ್ಬ ಮಕ್ಕಳಲ್ಲಿ ಹೊಸ ಚೈತನ್ಯಕ್ಕೆ ದಾರಿ ಮಾಡಿಕೊಟ್ಟಿದೆ.ಸರಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿರುವುದರಿಂದ ಇಂತಹ ವಿಶಿಷ್ಟ ಕಾರ್ಯಕ್ರಮದ ಜೊತೆಗೆ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯ.ಸಮುದಾಯದ ಎಲ್ಲರೂ ಶಾಲಾ ಶೈಕ್ಷಣಿಕ ಚಟುವಟಿಕೆಯಲ್ಲಿ ಸಹಭಾಗಿತ್ವ ವಹಿಸಿ ಸರಕಾರಿ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬ ಪಾಲಕರ,ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಹನುಮಾನಲೇನ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಚಿಕುಮಾರ ನಾಯರ್, ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಮನಗರ ಗ್ರಾಮ ಪಂಚಾಯತ ಸದಸ್ಯರಾದ ಶೋಬಾ ದೇಸಾಯಿ,ಅನಂತ ನಾಯ್ಕ,ಗ್ರಾಮದ ಹಿರಿಯರು,ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ವಿನಂತಿ ಸೋಲೆಕರ,ನಿವೃತ್ತ ಶಿಕ್ಷಕಿಯಾದ ಅರುಂದತಿ ಮಾಲಶೇಟ್,ವಿದ್ಯಾ ದೇಸಾಯಿ,ಸವಿತಾ ನಾಯಕ,ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ನಾರಾಯಣ ದೇಸಾಯಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಲಿಕಾ ಹಬ್ಬದ ಸ್ಪರ್ಧೆಯಲ್ಲಿ 1ರಿಂದ 3 ನೇಯ ತರಗತಿಯವರಿಗೆ ಪೋಷಕರೊಂದಿಗೆ ಮೋಜಿನ ಆಟ,ಕಥೆ ಹೇಳುವುದು,ಗಟ್ಟಿಯಾಗಿ ಓದುವುದು ಸ್ಪರ್ಧೆಗಳು. 4 ರಿಂದ 5 ನೇಯ ತರಗತಿಯವರಿಗೆ ಸಂತೋಷದಾಯಕ ಗಣಿತ,ಆರೋಗ್ಯ ಮತ್ತು ಪೌಷ್ಟಿಕಾಂಶ,ಕೈ ಬರಹ ಸ್ಪರ್ಧೆಗಳಲ್ಲಿ ರಾಮನಗರ ಕ್ಲಸ್ಟರಿನ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ರಾಮನಗರದ ಪ್ರಾಥಮಿಕ ಪ್ರೌಢಶಾಲೆಯ ಶಿಕ್ಷಕರು ಅತ್ತ್ಯುತ್ತಮ ಸಹಕಾರ ನೀಡಿದರು. ವೇದಿಕೆಯ ಮೇಲಿನ ಗಣ್ಯರು ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ,ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ವಿತರಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು. ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ,ಸಹ ಶಿಕ್ಷಕಿಯರಾದ ನಾಗರತ್ನಾ ಮೊಗೇರ,ಅನಿಸ್ ಫಾತಿಮಾ, ಸುನಿತಾ ಆರ್,ಸ್ಮಿತಾ ಜಾಧವ, ಸಂಜನಾ ಮಿರಾಶಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರಿಗೆ, ರಾಮನಗರ ಕ್ಲಸ್ಟರಿನ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು, ನಿರ್ಣಾಯಕರಿಗೆ,ವಿದ್ಯಾರ್ಥಿಗಳಿಗೆ ಎಲ್ಲರಿಗೂ ಅಚ್ಚುಕಟ್ಟಾದ ಶುಚಿ-ರುಚಿಯಾದ ಊಟದ ವ್ಯವಸ್ಥೆಯನ್ನು ಶಾಲಾ ಶಿಕ್ಷಕರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರ,ಪೋಷಕರ ಸಹಕಾರದಲ್ಲಿ ಮಾಡಿದ್ದರು. ಹನುಮಾನಲೇನ್ ಶಾಲೆಯ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು ಎಸ್ ಡಿ ಎಂ ಸಿ,ಹಳೆ ವಿದ್ಯಾರ್ಥಿಗಳ ಸಂಘ,ಶಿಕ್ಷಕ ವೃಂದ,ವಿದ್ಯಾರ್ಥಿ ವೃಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಾನಲೇನ್ ರಾಮನಗರ.ಸಮೂಹ ಸಂಪನ್ಮೂಲ ವ್ಯಕ್ತಿಗಳು, ರಾಮನಗರ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು,ಸಹ ಶಿಕ್ಷಕ ವೃಂದದವರು,ಸಮಸ್ತ ವಿದ್ಯಾರ್ಥಿ ವೃಂದದವರು ಯಶಸ್ಸಿನ ಕಾರ್ಯಕ್ರಮಕ್ಕೆ ಅತ್ತ್ಯುತ್ತಮ ಸಹಕಾರ ನೀಡಿದರು. ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಹನುಮಾನಲೇನ್ ಶಾಲೆಯ ಸಹ ಶಿಕ್ಷಕಿಯಾದ ನಾಗರತ್ನಾ ಮೊಗೇರ ಅತ್ಯುತ್ತಮವಾಗಿ ನಿರೂಪಿಸಿದರು.ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ,ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.