ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಇತ್ತೀಚೆಗೆ ಮುಸ್ಲಿಂ ಯುವಕನಿಂದ ಹತ್ಯೆಗೊಳಗಾದ ದಲಿತ ಹಿಂದೂ ಮಹಿಳೆ ರಂಜಿತಾಳ ಅನಾಥ ಪುತ್ರನಿಗೆ ಈಗಾಗಲೇ ನೀಡಿದ ವಾಗ್ದಾನಂದಂತೆ ಹಿಂದು ಸಂಘಟನೆಗಳ ಪರವಾಗಿ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆ ವತಿಯಿಂದ ಉಚಿತ ಶಿಕ್ಷಣದ ಪ್ರಮಾಣಪತ್ರವನ್ನು ಪ್ರದಾನ ಮಾಡಲಾಯಿತು.
ಹಿಂದೂ ಮಹಿಳೆ ರಂಜಿತಾ ಹತ್ಯೆ ಖಂಡಿಸಿ ನಡೆದ ಯಲ್ಲಾಪುರ ಬಂದ್ ಮತ್ತು ಪ್ರತಿಭಟನಾ ಸಭೆ ಸಂದರ್ಭದಲ್ಲಿ ಅನಾಥ ಬಾಲಕನ ಮುಂದಿನ ಶಿಕ್ಷಣದ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಪರವಾಗಿ ಹರಿಪ್ರಕಾಶ ಕೋಣೆಮನೆ ಅವರು ಪ್ರಕಟಿಸಿದ್ದರು.

ಅದೇ ದಿನ ಸಂಜೆ ನತದೃಷ್ಟೆಯ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಪರವಾಗಿ 5 ಲಕ್ಷ ರೂ. ನಗದು ಪರಿಹಾರ ನೀಡಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅನಾಥ ಬಾಲಕನಿಗೆ ಉಚಿತ ಶಿಕ್ಷಣ ನೀಡಲು ಮುಂದೆ ಬಂದಿರುವುದನ್ನು ಉಲ್ಲೇಖಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು.
ಬುಧವಾರ ಸಂಜೆ ಯಲ್ಲಾಪುರದ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರೊಂದಿಗೆ ಮೃತಳ ಮನೆಗೆ ತೆರಳಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಅವರು ರಂಜಿತಾಳ ಪುತ್ರ ಸ್ವಾತಿಕ್ ಸಚಿನ್ ಕಾಟೆಗೆ ಉಚಿತ ಶಿಕ್ಷಣದ ಲಿಖಿತ ವಾಗ್ದಾನ ಪತ್ರವನ್ನು ನೀಡಿದರು.

ಆಟೋ ಚಾಲಕನಿಗೆ ಸನ್ಮಾನ:
ದಲಿತ ಹಿಂದೂ ಮಹಿಳೆ ರಂಜಿತಾಳ ಮೇಲೆ ಹಂತಕ ಮಾರಣಾಂತಿಕ ದಾಳಿ ನಡೆಸಿದ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ ಸಿಗದಿದ್ದಾಗ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದ ಆಟೋ ಚಾಲಕ ಚಂದ್ರಶೇಖರ ಭೋವಿವಡ್ಡರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಪ್ರಮುಖರಾದ ಬಿಜೆಪಿ ಮಂಡಳ ಅಧ್ಯಕ್ಷರಾದ ಶ್ರೀ ಪ್ರಸಾದ ಹೆಗಡೆ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಶ್ರೀ ಗಜಾನನ ನಾಯ್ಕ, ಪ್ರಮುಖರಾದ ವೆಂಕಟ್ರಮಣ ಬೆಳ್ಳಿ, ಶ್ಯಾಮಿಲಿ ಪಾಟಣಕರ, ಶ್ರುತಿ ಹೆಗಡೆ, ಮಂಜುನಾಥ ಹಿರೇಮಠ, ಅನಂತ ಕಂಚಿಪಾಲ, ಗಿರೀಶ ಭಾಗ್ವತ ಮೊದಲಾದವರು ಉಪಸ್ಥಿತರಿದ್ದರು.