ಸುದ್ದಿ ಕನ್ನಡ ವಾರ್ತೆ
ಉಡುಪಿ: ಇಂದಿನ ಶಿಕ್ಷಣದಲ್ಲಿ ಅಜ್ಞಾನದ ಕೊರತೆಗಿಂತ ವಿವೇಕದ ಕೊರತೆ ಹೆಚ್ಚಾಗಿದೆ. ವಿವೇಕ ಇಲ್ಲದ ಪದವಿ ವ್ಯರ್ಥ ಎಂದು ಶಿಕ್ಷಣ ತಜ್ಞ, ಖ್ಯಾತ ವಾಗ್ಮಿ  ಡಾ.ಗುರುರಾಜ ಕರ್ಜಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಬುಧವಾರ ಗೀತಾ ಮಂದಿರದ ಶ್ರೀ ನೃಸಿಂಹ ಸಭಾಂಗಣದಲ್ಲಿ ನಡೆದ ಜ್ಞಾನಸಂದೇಶ ಕಾರ್ಯಕ್ರಮದಲ್ಲಿ ‘ಭಗವದ್ಗೀತೆ ಮತ್ತು ಶಿಕ್ಷಣ’ ವಿಷಯದಲ್ಲಿ ಉಪನ್ಯಾಸ ನೀಡಿದರು.

ಭಗವದ್ಗೀತೆಯೇ ಶಿಕ್ಷಣ. ಗೀತೆಯ ಪ್ರತಿಯೊಂದು ಅಕ್ಷರವೂ ಅಜ್ಞಾನ ಕಳೆಯುತ್ತದೆ. ಭಗವದ್ಗೀತೆ ಕೇವಲ ಹಿಂದೂ ಧರ್ಮದ ಗ್ರಂಥವಲ್ಲ. ಮನುಷ್ಯ ಹಾಗೂ ಸಮಾಜ ಬದುಕುವ ಬಗೆಯನ್ನು ಕಲೆಯನ್ನು ಕಲಿಸುವ ಗ್ರಂಥ. ಪ್ರಪಂಚದ ಯಾವುದೇ ಧರ್ಮದ ಗ್ರಂಥಗಳಲ್ಲಿ ಕೃಷ್ಣನಂಥ ಪಾತ್ರ ಇಲ್ಲ ಎಂದರು.
ಆಧುನಿಕ ಶಿಕ್ಷಣದಲ್ಲಿರುವ ಮನೋವಿಜ್ಞಾನ, ಜೀವನಾದರ್ಶ ಶಿಕ್ಷಣ ಎಲ್ಲವೂ ಗೀತೆಯಲ್ಲಿ ಉಲ್ಲೇಖವಾಗಿದೆ. ಗುರು- ಶಿಷ್ಯ ಸಂಬಂಧ ಚಿತ್ರಿತವಾಗಿದೆ ಎಂದರು.
ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ ನೀಡಬೇಕು.‌ ಶಿಕ್ಷಣ ಚೆನ್ನಾಗಿದ್ದರೆ ಗಳಿಕೆ ಉತ್ತಮವಾಗಿರುತ್ತದೆ. ತಮಗೋಸ್ಕರ ಬದುಕುವವರನ್ನು ಸಮಾಜ ಮರೆಯುತ್ತದೆ. ಅನ್ಯರಿಗೆ ಸಹಕಾರ ನೀಡಿದರೆ ನೆನಪು ಉಳಿಯುತ್ತದೆ.
ಒತ್ತಡ ಇಲ್ಲದಿರುವುದೇ ಸಾಧನೆಗೆ ಮೂಲ. ಒತ್ತಡ ಇದ್ದಾಗ ಕೆಲಸ ಕಡಿಮೆಯಾಗುತ್ತದೆ.
ಶಿಕ್ಷಕ ಮಾರ್ಗದರ್ಶಕನೇ ಹೊರತು ಭಾಷಣಕಾರನಲ್ಲ. ಗುರುವಿನ ಬಗ್ಗೆ ಶ್ರದ್ಧೆ ಇಲ್ಲದಿದ್ದಲ್ಲಿ ಜ್ಞಾನ ಲಭಿಸದು. ಗೂಗಲ್‌ನಿಂದಾಗಿ ಈಚಿನ ದಿನಗಳಲ್ಲಿ ಗುರುವಿನ ಪಾತ್ರ ಕಡಿಮೆಯಾಗಿದೆ. ಜೊತೆಗೆ ಗುರು ಇನ್ನಷ್ಟು ಜ್ಞಾನ ಸಂಪಾದಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.
ಶಿಕ್ಷಣದ ಗುರಿಯನ್ನು ಗೀತೆಯಲ್ಲಿ ಸ್ಪಷ್ಟಪಡಿಸಿದ ಕೃಷ್ಣ, ಸಮೃದ್ಧ ಜೀವನ ನಡೆಸಲು ಮಕ್ಕಳನ್ನು ಸಿದ್ಧಪಡಿಸಬೇಕು.
ಭಾವನೆಗಳ ನಿಯಂತ್ರಣ ಮುಖ್ಯ. ವಿದ್ಯಾರ್ಥಿ ಭಾವೋದ್ವೇಗಕ್ಕೆ ಒಳಗಾಗದೇ ಸ್ಥಿತಪ್ರಜ್ಞನಾಗಿರಬೇಕು.
ಬಂಧ ಮೋಕ್ಷ ಸಹಿತ ಎಲ್ಲದಕ್ಕೂ ಮನಸ್ಸೇ ಕಾರಣ. ಹಾಗಾಗಿ ಮಕ್ಕಳಿಗೆ ಮನಸ್ಸಿನ ಬಗ್ಗೆ ತಿಳಿಸಬೇಕು. ಅವರಿಗೆ ತೀರ್ಮಾನ ಕೈಗೊಳ್ಳಲು ಅವಕಾಶ ನೀಡುವ ಸ್ವಾತಂತ್ರ್ಯವನ್ನು ಶಿಕ್ಷಣದಲ್ಲಿ ನೀಡಬೇಕು.
ಎಲ್ಲವನ್ನೂ ತಿಳಿಸಿ,‌ ವಿದ್ಯಾರ್ಥಿಗಳ ಆಯ್ಕೆಗೆ ಬಿಡಬೇಕು ಎಂದು ಡಾ.ಕರ್ಜಗಿ ಹೇಳಿದರು‌.
ಆಧುನಿಕ ಶಿಕ್ಷಣ ಕಲಿಕೆ, ಉದ್ಯೋಗ ಬಗ್ಗೆ ಹೇಳಿದರೆ ಗೀತೆ ಬದುಕನ್ನು ಕಲಿಸುತ್ತದೆ. ಶಿಕ್ಷಣದಲ್ಲಿ ಗೀತೆ ತಿಳಿಸಿದಲ್ಲಿ ಮನುಷ್ಯ ಮಹಾಮಾನವನ್ನಾಗಿಸುತ್ತದೆ ಎಂದರು.

ಸ್ವಪ್ರಯತ್ನದಿಂದ ಸಾಧನೆ
ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಸ್ವಪ್ರಯತ್ನದಿಂದ ಯಾವುದನ್ನೂ ಸಾಧಿಸಬಹುದು. ನಮ್ಮ ಶಕ್ತಿ, ಸಾಮರ್ಥ್ಯ ತಿಳಿಯದಾಗಿದ್ದೇವೆ ಎಂದು ಪುತ್ತಿಗೆ ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಡಾ.ಕರ್ಜಗಿ ಅವರನ್ನು ಶ್ರೀಕೃಷ್ಣಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.
ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ನವದೆಹಲಿ ಇಸ್ರೋ ಮಾಜಿ ಉಪ ನಿರ್ದೇಶಕ ಎಸ್.ವಿ. ಶರ್ಮ, ವೀಣಾ ವಾದಕಿ ರೇವತಿ ಕಾಮತ್, ರಘುನಾಥ ಆಸ್ಟಿನ್ ದಂಪತಿ ಅಭ್ಯಾಗತರಾಗಿದ್ದರು. ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.
ಶ್ರೀಮಠದ ಕೆ.ವಿ.ರಮಣ್ ಸ್ವಾಗತಿಸಿದರು. ಸುಗುಣಮಾಲಾ ಸಂಪಾದಕ ಮಹಿತೋಷ ಆಚಾರ್ಯ ನಿರೂಪಿಸಿದರು.