ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮೋಪಾ ವಿಮಾನ ನಿಲ್ದಾಣದಲ್ಲಿ ಜಿಎಂಆರ್ ಕಂಪನಿಯ ಹೊಸ ನಿಯಮಗಳ ಬಗ್ಗೆ ರಾಜ್ಯದ ಎಲ್ಲ ಪ್ರವಾಸಿ ಟ್ಯಾಕ್ಸಿ ಚಾಲಕರು ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಈ ನಿಯಮಗಳ ಪ್ರಕಾರ ವಿಮಾನ ನಿಲ್ದಾಣಕ್ಕೆ ಪಿಕಪ್ ಮತ್ತು ಡ್ರಾಪ್ ವಲಯಗಳಲ್ಲಿ 2 ರಿಂದ 5 ನಿಮಿಷಗಳಿಗಿಂತ ಹೆಚ್ಚು ಸಮಯ ನಿಲ್ಲುವ ಟ್ಯಾಕ್ಸಿ ಚಾಲಕರಿಂದ 210 ರೂ ಶುಲ್ಕ ವಿಧಿಸಲಾಗುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ವಾಹನದಿಂದ ಲಗೇಜ್ ಇಳಿಸಿ ಪ್ರಯಾಣಿಕರೊಂದಿಗೆ ಸಮನ್ವಯ ಸಾಧಿಸುವುದು ಕಷ್ಟವಾಗುತ್ತಿದೆ. ಸಮಯ ಮಿತಿ ಮತ್ತು ದಂಡವು ಅಪ್ರಾಯೋಗಿಕವಾಗಿದೆ ಎಂದು ಟ್ಯಾಕ್ಸಿ ಚಾಲಕರು ಈ ಸರ್ವಾಧಿಕಾರಿ ನಿರ್ಧಾರದ ವಿರುದ್ಧ ಬುಧವಾರ ಪ್ರತಿಭಟಿಸಿದರು.

ಬುಧವಾರ ಬೆಳಿಗ್ಗೆ ಕೋಲ್ವಾಳದ ಹೌಸಿಂಗ್ ಬೋರ್ಡ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಕ್ಸಿ ಚಾಲಕರು ಜಮಾಯಿಸಿದರು. ನಂತರ ಪೋಲಿಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು , ಟ್ಯಾಕ್ಸಿ ಚಾಲಕರು 15 ಸದಸ್ಯರ ನಿಯೋಗದೊಂದಿಗೆ ಜಿಎಂ ಆರ್ ಅಧಿಕಾರಿಗಳನ್ನು ಭೇಟಿ ಮಾಡಲು ಮೋಪಾ ವಿಮಾನ ನಿಲ್ದಾಣಕ್ಕೆ ತೆರಳಿದರು.

ಟ್ಯಾಕ್ಸಿ ಅಸೋಸಿಯೇಶನ್ ಪದಾಧಿಕಾರಿ ಯೋಗೇಶ್ ಗೋವೆಕರ್ ಈ ಕುರಿತು ಮಾತನಾಡಿ- ಜಿಎಂ ಆರ್ ಕಂಪನಿಯು ಮೋಪಾ ವಿಮಾನ ನಿಲ್ದಾಣದಲ್ಕಿ ಅನಿಯಂತ್ರಿತ ಆಡಳಿತ ನಡೆಸುತ್ತಿದೆ. ಪಿಕಪ್ ಮತ್ತು ಡ್ರಾಫ್ ಗಾಗಿ ಬರುವ ವಾಹನಗಳು ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ಕಾಯುತ್ತಿದ್ದರೆ 210 ರೂ ಶುಲ್ಕ ವಿಧಿಸಲಾಗುತ್ತದೆ. ಇದು ಟ್ಯಾಕ್ಸಿ ಮಾಲೀಕರಿಗೆ ಅರ್ಥಿಕ ಹೊಡೆತವಾಗಿದೆ. ಈ ನಿರ್ಧಾರವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಜಿಎಂ ಆರ್ ಈ ನಿರ್ಧಾರವನ್ನು ಹಿಂಪಡೆಯಬೇಕು. ಟೋಲ್ ಪಾಯಿಂಟ್ ಗಳನ್ನು ತೆಗೆದುಹಾಕಬೇಕು ಎಂದು ಆಘ್ರಹಿಸಿದರು.

ಜಿಎಂ ಆರ್ ಈಗ ಸರ್ಕಾರದ ಅಳಿಯನಾಗಿ ಮಾರ್ಪಟ್ಟಿದೆ. ವಿಮಾನ ನಿಲ್ದಾಣದಲ್ಲಿ ವಾಹನಗಳಿಂದ ಸಾಮಾನುಗಳನ್ನು ತೆಗೆದುಹಾಕಲು ಜಿಎಂ ಆರ್ ತನ್ನದೇ ಆದ ಸಿಬ್ಬಂಧಿಗಳನ್ನು ನೇಮಿಸಬೇಕು, ಇದ್ರಿಂದ ಅವರಿಗೆ ವಾಸ್ತವ ಅರ್ಥವಾಗುತ್ತದೆ. ಈ ನಿರ್ಧಾರವನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಗೋವೆಕರ್ ಎಚ್ಚರಿಸಿದರು.