ಸುದ್ಧಿಕನ್ನಡ ವಾರ್ತೆ
ಪಣಜಿ: ಹೊಸ ವರ್ಷದ ಮೊದಲ ತಿಂಗಳು ಗೋವಾಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಗೋವಾಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಭಾನುವಾರ ಸಂಜೆ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಗೋವಾಕ್ಕೆ ಆಗಮಿಸಿದ್ದಾರೆ. ಈ  BIG-3  ಆಗಮನದ ಹಿನ್ನೆಲೆಯಲ್ಲಿ ರಾಜ್ಯದ ಸುರಕ್ಷಾ ದಳ, ಟ್ರಾಫಿಕ್ ಪೋಲಿಸ್ ವಿಭಾಗ, ಸಾಮಾನ್ಯ ಪ್ರಶಾಸನ ಸಂಪೂರ್ಣ ಅಲರ್ಟ ಆಗಿದೆ. ಒಂದೇ ತಿಂಗಳು ಈ ಮೂವರು VVIP ಗಳ ಆಗಮನದಿಂದಾಗಿ ಜನವರಿ ಇಡೀ ತಿಂಗಳು ಗೋವಾದಲ್ಲಿ ಹೆಚ್ಚಿನ ಬಂದೋಬಸ್ತ ಜಾರಿಗೊಳಿಸಲಾಗಿದೆ.

ಕೇಂದ್ರ ಗೃಹಮಂತ್ರಿ ಅಮಿತ್ ಶಾ ಆಗಮನ…
ಜನವರಿ 26 ರಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ಗೋವಾಕ್ಕೆ ಆಗಮಿಸಲಿದ್ದು ಪಣಜಿ ಸಮೀಪದ ಬಾಂಬೋಲಿಂ ಬಳಿಯ ಐಶಾರಾಮಿ ಹೋಟೆಲ್ ವೊಂದರಲ್ಲಿ ನಡೆಯಲಿರುವ ಪಶ್ಚಿಮ ವಿಭಾಗೀಯ ಪರಿಷತ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಪರಿಷತ್ ನಲ್ಲಿ ಗೋವಾ, ಮಹಾರಾಷ್ಟ್ರ, ಗುಜರಾತ್, ಹಾಗೂ ರಾಜಸ್ಥಾನ ರಾಜ್ಯಗಳ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ವರಿಷ್ಠ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯಾಂತರ್ಗತ ಸಮಸ್ಯೆ, ಸೀಮಾ ಸುರಕ್ಷೆ, ಪ್ರಶಾಸಕೀಯ ಸಮನ್ವಯದ ಕುರಿತಂತೆ ಈ ಬೈಠಕ್ ನಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇಂಡಿಯಾ ಎನರ್ಜಿ ವೀಕ್ ನಲ್ಲಿ ಪ್ರಧಾನಿ ಮೋದಿ…
ಜನವರಿ 27 ರಿಂದ ದಕ್ಷಿಣ ಗೋವಾದ ಬೇತಲ್ ನಲ್ಲಿ ಇಂಡಿಯಾ ಎನರ್ಜಿ ವೀಕ್ (India Energy Week) ಎಂಬ ಅಂತರಾಷ್ಟ್ರೀಯ ಪರಿಷತ್ (International Council)  ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯರು ಮಾತ್ರವಲ್ಲದೆಯೇ ಜಗತ್ತಿನಾದ್ಯಂತ ವಿದ್ಯುತ್ ಉತ್ಪಾದನಾ ಕ್ಷೇತ್ರದ ತಜ್ಞರು , ದೊಡ್ಡ ದೊಡ್ಡ ಉದ್ಯಮಿಗಳು, ಹಾಗೂ ವಿದೇಶಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಮಡಗಾಂವ ಸಮೀಪದ ಬೇತಲ್ ಪರಿಸರವು ಈ ಅಂತರಾಷ್ಟ್ರೀಯ ಪರಿಷತ್ ಗಾಗಿ ಸಜ್ಜಾಗುತ್ತಿದೆ. ಈ ಪರಿಷತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲಯಲ್ಲಿ ಪ್ರಧಾನಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಕೇಂದ್ರ ಸುರಕ್ಷಾ ದಳ (SPG) ಗಳು ಈಗಾಗಲೇ ಕಾರ್ಯಕ್ರಮ ಆಯೋಜನಾ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಗೋವಾಕ್ಕೆ ಒಂದೇ ತಿಂಗಳಲ್ಲಿ ಈ ವಿವಿಐಪಿಗಳ ಆಗಮನದಿಂದಾಗಿ ಗೋವಾ ಪೋಲಿಸರಿಗೆ ಗೋವಾದಲ್ಲಿನ ಸಾರಿಗೆ ವ್ಯವಸ್ಥೆ ಹಾಗೂ ಸುರಕ್ಷತೆಯ ಹೆಚ್ಚಿನ ಸವಾಲು ಎದುರಾಗಿದೆ. ಈ ನಾಯಕರ ಆಗಮನದ ಹಿನ್ನೆಲೆಯಲ್ಲಿ ಗೋವಾದ ಬಾಂಬೋಲಿಂ ,ಗೋವಾ ಶಿಪ್ ಯಾರ್ಡ, ಹಾಗೂ ಮಡಗಾಂವ ಬೇತಲ್ ಪರಿಸರವನ್ನು ಸಂವೇದನಾಶೀಲ ಕ್ಷೇತ್ರ ಎಂದು ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಹಲವು ಮಾರ್ಗಗಳ ವಾಹನ ಸಂಚಾರದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಇಷ್ಟೇ ಅಲ್ಲದೆಯೇ ವಿವಿಐಪಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಆವರು ಆಗಮನದ ದಿನದಂದು ಕೆಲ ರಸ್ತೆಗಳು ಬಂದ್ ಆಗುವ ಸಾಧ್ಯತೆ ಕೂಡ ಇದೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ,ದೈನಂದಿನ ಓಡಾಟದ ಮೇಲೆ, ಪ್ರವಾಸಿಗರ ಮೇಲೆ ಉಂಟಾಗುವ ಸಾಧ್ಯತೆಯಿದೆ.